ಬೆಂಗಳೂರು, ಮಾ.2 – ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ತಿರಸ್ಕರಿಸುವಂತೆ ಆಗ್ರಹಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇದೀಗ ಪರ್ಯಾಯ ಜಾತಿಗಣತಿ ಮಾಡುವುದಾಗಿ ಪ್ರಕಟಿಸಿದೆ.
ಕಾಂತರಾಜು ನೇತೃತ್ವದ ಆಯೋಗ ನಡೆಸಿದ ಜಾತಿ ಗಣತಿ ವರದಿಗೆ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ಅಂತಿಮ ರೂಪ ನೀಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಇದರಲ್ಲಿನ ವಿವರಗಳ ಬಗ್ಗೆ ವೀರಶೈವ ಮಹಾಸಭಾ ಸೇರಿದಂತೆ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ ತೀರಾ ಹಿಂದುಳಿದ ಸಮುದಾಯಗಳು ಈ ವರದಿ ಅನುಷ್ಠಾನಕ್ಕೆ ತರಬೇಕು ಎಂದು ಆದರೆ ಆಗ್ರಹಿಸಿವೆ.
ಜಯಪ್ರಕಾಶ್ ಹೆಗಡೆಯವರು ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ತೀರಾ ಅವೈಜ್ಞಾನಿಕವಾಗಿದೆ ಜಾತಿವಾರು ಜನಸಂಖ್ಯೆಯ ಬಗ್ಗೆ ಮಾಹಿತಿ ಅಪೂರ್ಣವಾಗಿದ್ದು ಖಚಿತ ಮಾಹಿತಿ ನೀಡುವ ದೃಷ್ಟಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಜಾತಿ ಗಣತಿ ಮಾಡಲು ಯೋಚಿಸುತ್ತಿದ್ದೇವೆ’ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಬಳಿ ಹಣ, ಸಿಬ್ಬಂದಿ ಎಲ್ಲವೂ ಇದೆ. ಯಾವಾಗ ಮಾಡಿಸುತ್ತೇವೆ ಎಂದು ಬರೆದುಕೊಡಲು ಆಗುವುದಿಲ್ಲ. ಜಾತಿಗಣತಿ ಮಾಡುವ ಬಗ್ಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದರು.
ಹತ್ತು ವರ್ಷಗಳ ಹಿಂದಿನ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಮುಖ್ಯಮಂತ್ರಿಗೆ ನೀಡಲಾಗಿದೆ. ಕಾಂತರಾಜ ಅವರು ವರದಿ ಬರೆದಿದ್ದಾರೋ ಇಲ್ಲ ಕೆ.ಜಯಪ್ರಕಾಶ್ ಹೆಗ್ಡೆ ಅವರು ತಯಾರಿಸಿದ್ದಾರೋ ಗೊತ್ತಿಲ್ಲ. ಲಿಂಗಾಯತರು 2 ಕೋಟಿಯಷ್ಟು ಇದ್ದೇವೆ. ಆದರೆ, ವರದಿಯಲ್ಲಿ ಕಡಿಮೆ ತೋರಿಸಲಾಗಿದೆ. ಒಕ್ಕಲಿಗರು, ಬ್ರಾಹ್ಮಣರು ಲಿಂಗಾಯತರು ಎಲ್ಲಾ ಸೇರಿಕೊಂಡು ಈ ವರದಿ ಒಪ್ಪಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ಮಾಡುತ್ತೇವೆ’ ಎಂದರು.
ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ– 2015’) ವರದಿಯನ್ನು ಸ್ವೀಕಾರ ಮಾಡಿದ್ದಾರೆ ಅಷ್ಟೇ. ಅದನ್ನು ಸದನದಲ್ಲಿ ಪಾಸ್ ಮಾಡಿಲ್ಲ. ಸ್ವೀಕಾರ ಮಾಡಲಿ ಬಿಡಿ ತಪ್ಪೇನಿದೆ. ವರದಿಗೆ ನಮ್ಮ ವಿರೋಧವಂತೂ ಇದ್ದೇ ಇದೆ. ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.