ಬೆಂಗಳೂರು, ಸೆ. 24:
ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದ ಕುರಿತು ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರವನ್ನು ಅಭದ್ರಗೊಳಿಸಿ, ನನಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಜೆಡಿಎಸ್ ಪಿತೂರಿ ನಡೆಸಿವೆ ಎಂದು ಆರೋಪಿಸಿದ್ದಾರೆ.
ಮುಡಾ ನಿವೇಶನ ಹಂಚಿಕೆ ಕುರಿತಾದ ಹೈಕೋರ್ಟ್ ತೀರ್ಪು ಹೊರ ಬಿದ್ದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ವರ್ಚಸ್ಸಿಗೆ ಕಪ್ಪುಮಸಿ ಬಳಿದು ಸರ್ಕಾರವನ್ನು ಪತನಗೊಳಿಸುವ ಜೆಡಿಎಸ್ ಮತ್ತು ಬಿಜೆಪಿ ಪ್ರಯತ್ನಕ್ಕೆ ಸೋಲು ಖಚಿತ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ , ಬಿಎನ್ ಎಸ್ ಎಸ್ ಕಲಂ 218 ಹಾಗೂ ಪಿಸಿ ಕಾಯ್ದೆ ಕಲಂ 19 ರಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವುದನ್ನು ತಿರಸ್ಕರಿಸಿ, ಪಿಸಿ ಕಾಯ್ದೆಯ 17 ಎ ಪ್ರಕಾರ ತನಿಖೆಗೆ ಆದೇಶ ನೀಡಿದೆ. ಈ ತೀರ್ಪಿನ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ,ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಈ ಪ್ರಕರಣದಲ್ಲಿ ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. ಪಿ.ಸಿ.ಕಾಯಿದೆ 17 ಎ ರಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿ ಎನ್.ಎಸ್.ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ತಮ್ಮ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನ ಪಿತೂರಿ ಮಾಡಿ ರಾಜಭವನ ದುರುಪಯೋಗ ಮಾಡಿಕೊಂಡಿವೆ ಈ ದುರ್ಬಳಕೆಗೆ ಹಾಗೂ ಪಿತೂರಿಗೆ ನಾನು ಹೆದರುವುದಿಲ್ಲ.ರಾಜ್ಯದ ಜನತೆ, ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ ಎಂದು ಹೇಳಿದರು.
ನರೆಂದ್ರ ಮೋದಿಯವರ ಬಿಜೆಪಿ ಸರ್ಕಾರ , ಕೇವಲ ನನ್ನ ಮೇಲಷ್ಟೇ ಅಲ್ಲ , ಇಡೀ ದೇಶದ ವಿರೋಧಪಕ್ಷಗಳ ವಿರುದ್ಧ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ.ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಾ ಬಂದಿದ್ದಾರೆ.ನಮ್ಮ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾದ ಮೇಲೆ ಇಂತಹ ಪಿತೂರಿ ಮಾಡುತ್ತಿದ್ದಾರೆ ಎಂದು ದೂರಿದರು.