ಕನ್ನಡ ಚಾನೆಲ್ ಕಟ್ಟಲು ಕನ್ನಡದ ಮನಸ್ಸುಗಳು ಬೇಕು. ಯಾವಯಾವುದೋ ಕಾರಣಕ್ಕೆ ಯಾರಯಾರನ್ನೋ ತಂದು ಚಾನೆಲ್ ಹೆಡ್ ಸ್ಥಾನದಲ್ಲಿ ಕೂರಿಸಿದರೆ ಯಾವುದು ಆಗಬಾರದೋ ಅದೇ ಆಗತ್ತೆ.
ಸುವರ್ಣ ಚಾನೆಲ್ ನಲ್ಲಿ ಆಗಿದ್ದು ಅದೇ. ರವಿ ಬೆಳೆಗೆರೆ ಅವರ ಜನಪ್ರಿಯ ಕಾದಂಬರಿ `ಹೇಳಿಹೋಗು ಕಾರಣ’ ಧಾರಾವಾಹಿ ಪ್ರಸಾರಕ್ಕೆ ಯೋಗ್ಯವಲ್ಲ ಅಂತ ತಿರಸ್ಕರಿಸಿದೆ. ಆದರೆ ಇದು ದೊಡ್ಡ ಸುದ್ದಿಯಾಗಲೇ ಇಲ್ಲ.
‘ಹೇಳಿಹೋಗು ಕಾರಣ’ ಧಾರಾವಾಹಿ ಮಾಡಲು ಸುವರ್ಣ ಚಾನೆಲ್ ತಾತ್ವಿಕ ಒಪ್ಪಿಗೆ ನೀಡಿತ್ತು. ಜೀ ಕನ್ನಡದ `ಗಟ್ಟಿಮೇಳ’ ಬಿಟ್ಟು ಹೊರಬಂದಿದ್ದ ನಿರ್ದೇಶಕ ಅನಿಲ್ ಕೋರಮಂಗಲ ಆರೆಂಟು ತಿಂಗಳು ಶ್ರಮ ಹಾಕಿ 15 ಎಪಿಸೋಡ್ ಚಿತ್ರೀಕರಣ ಕೂಡ ಮಾಡಿದ್ದರು. ಅಷ್ಟರಲ್ಲಿ ಮುಖ್ಯಸ್ಥರ ಬದಲಾವಣೆಯಾಗಿ ಮುಂಬೈ ಮೂಲದ ಸುಷ್ಮಾ ಸುರೇಶ್ ಬ್ಯುಸಿನೆಸ್ ಹೆಡ್ ಆಗಿ ಬಂದರು. ಫಿಕ್ಷನ್ ಹೆಡ್ ಆಗಿ ಉದಯ ಟಿವಿಲಿದ್ದ ಇನ್ನೊಬ್ಬಾಕೆ ಮುಂಬೈವಾಲಿ ಶಿಲ್ಪಾ ಕೊಟೆಚಾ ನೇಮಕವಾದರು. ಅನಿಲ್ ಗೆ ವಕ್ರದೆಸೆ ಶುರುವಾಯ್ತು. ಅದು ಹೋಗಲಿ, ಕನ್ನಡ ಸಾಹಿತ್ಯದ ಗಂಧ ಗಾಳಿ ಇಲ್ಲದ ಶಿಲ್ಪಾ ಕೊಟೆಚಾ 50 ಲಕ್ಷ ರೂಪಾಯಿ ಖರ್ಚುಮಾಡಿ ನಿರ್ಮಿಸಿದ್ದ `ಹೇಳಿ ಹೋಗು ಕಾರಣ’ ಧಾರಾವಾಹಿಯ 15 ಸಂಚಿಕೆಗಳನ್ನೂ ಕಸದ ಬುಟ್ಟಿಗೆ ಎಸೆದುಬಿಟ್ಟರು. ಅನಿಲ್ ಬಾಯಿಬಾಯಿ ಬಡಿದುಕೊಳ್ಳುವಂತಾಯ್ತು.
ಇಲ್ಲಿ ಶಿಲ್ಪಾ ಒಬ್ಬ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದಿದ್ದು ಒಂದು ಕಡೆ. ಇನ್ನೊಂದು ಕಡೆ ಕನ್ನಡದ ಮೇರು ಬರಹಗಾರ ರವಿ ಬೆಳಗೆರೆಗೆ ಅವಮಾನ ಮಾಡಿದ್ದು ! ಇದರ ವಿರುದ್ಧ ಯಾವ ಕ.ರ.ವೇ ಸಹ ಪ್ರತಿಭಟಿಸಲಿಲ್ಲ. ಹೋಗಲಿ, ನಿರ್ಮಾಪಕ ಅನಿಲ್ ಕೂಡ ಸೊಲ್ಲೆತ್ತಲಿಲ್ಲ. ಅನಿಲ್ ಒಂದು ಪ್ರತಿಭಟನೆಯ ಕಿಡಿ ಹೊತ್ತಿಸಿದ್ದರೆ ನಡೆಯುತ್ತಿದ್ದ ಕಥೆ ಬೇರೆ. ಆದರೆ ಅವರೇಕೋ `ಜೇನುಗೂಡು’ ರೀಮೇಕ್ ಧಾರಾವಾಹಿ ಸಿಕ್ಕಿತು ಅಂತ ನಡು ಬಗ್ಗಿಸಿಬಿಟ್ಟರು. ಹೊಟ್ಟೆಪಾಡು.
ಕನ್ನಡ ಸಾಹಿತಿಗೆ ಸಾಹಿತ್ಯಕ್ಕೆ ಕನ್ನಡ ಬಾರದ ಹೆಣ್ಣುಮಕ್ಕಳಿಬ್ಬರು ಸೇರಿಕೊಂಡು ಅವಮಾನ ಮಾಡಿದ್ದನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೂಡ ಪ್ರಶ್ನಿಸಲಿಲ್ಲ. ಅದೊಂಥರಾ ಹಲ್ಲಿಲ್ಲದ ಹಾವು!
ಇಷ್ಟೆಲ್ಲ ಆವಾಂತರ ಮಾಡಿದ ಸುಷ್ಮಾ-ಶಿಲ್ಪಾ ಲಾಂಚ್ ಮಾಡಿದ ರಿಮೇಕ್ ಮುದ್ದುಮಣಿಗಳು, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಆಹಾ ಓಹೋ ಅನ್ನುವ ಸದ್ದು ಮಾಡಲಿಲ್ಲ. ಚಾನೆಲ್ ನಾಲ್ಕನೇ ಸ್ಥಾನ ಬಿಟ್ಟು ಮೇಲೆದ್ದಿಲ್ಲ. ಸ್ಟಾರ್- ಡಿಸ್ನಿ ಮ್ಯಾನೇಜ್ ಮೆಂಟ್ ನವರು ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ನೋಡಿ ಕಲಿಯಬೇಕಾದ ಮೊದಲ ಪಾಠ – ಕನ್ನಡ ವಾಹಿನಿ ನಡೆಸಲು ಕನ್ನಡ ಮನಸ್ಸಿನ ಸಾರಥಿ ಇದ್ದರೆ ಮಾತ್ರ ಸಾಧ್ಯ ಅಂತ. ಹೀಗಾದಾಗ ಚಾನೆಲ್ ಉದ್ಧಾರ ಆಗುವುದರ ಜೊತೆಗೆ ಕನ್ನಡ ಸಾಹಿತಿಗಳಿಗೆ ಅವಮಾನ ಆಗುವುದಾದರೂ ನಿಲ್ಲಬಹುದು.