ಕೊಲ್ಹಾಪುರ,ಜೂ.3-ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ ಕುಮಾರ್ ಭನ್ವರ್ ಲಾಲ್ ಗುಪ್ತಾನನ್ನು ಸಹ ಕೈದಿಗಳೇ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕೊಲ್ಹಾಪುರದಲ್ಲಿರುವ ಕಲಾಂಬಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೊಹಮ್ಮದ್ ಅಲಿ ಖಾನ್ (59)ನನ್ನು ಐವರು ಕೈದಿಗಳು ಕೊಲೆಮಾಡಿದ್ದು,ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೈಲಿನ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಾಗ್ವಾದ ನಡೆದು ಇತರ ಕೈದಿಗಳು ಮನ್ನಾ ಅಲಿಯಾಸ್ ಮೊಹಮ್ಮದ್ ಅಲಿ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದಾರೆ.
ಮೊಹಮ್ಮದ್ ಅಲಿ ಖಾನ್ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯಾಗಿದ್ದಾನೆ. ಸ್ಫೋಟಕ್ಕೆ ಮೊದಲು ಭಯೋತ್ಪಾದಕರಿಗೆ ಆರ್ಡಿಎಕ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ತಲುಪಿಸಿದ ಆರೋಪ ಮೊಹಮ್ಮದ್ ಮೇಲಿದೆ. ಸದ್ಯ ಕೊಲ್ಹಾಪುರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಕಲಂಬಾದ ಕೇಂದ್ರ ಕಾರಾಗೃಹದಲ್ಲಿದ್ದ ಮೊಹಮ್ಮದ್ ಅಲಿ ಖಾನ್ ಅವರನ್ನು ಭಾನುವಾರ ಬೆಳಿಗ್ಗೆ ಕೆಲವು ಕೈದಿಗಳು ಚರಂಡಿ ಮುಚ್ಚಳದಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಅಲಿ ನೀರಿನ ಟ್ಯಾಂಕ್ ಬಳಿ ಸ್ನಾನ ಮಾಡಲು ಹೋದಾಗ, 5 ಕೈದಿಗಳು ಒಟ್ಟಾಗಿ ಒಳಚರಂಡಿಗೆ ತಳ್ಳಿ ಹಲ್ಲೆ ನಡೆಸಿದ್ದರು. ಈ ವೇಳೆ ಒಳಚರಂಡಿಯಲ್ಲಿಟ್ಟಿದ್ದ ಕಬ್ಬಿಣದ ರಾಡ್‌ನಿಂದ ಖಾನ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ತೀವ್ರ ರಕ್ತಸ್ತ್ರಾವದಿಂದ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಖಾನ್ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಪಿಳ್ಳ್ಯ ಸುರೇಶ್ ಪಾಟೀಲ್, ಸಂದೀಪ್ ಶಂಕರ್, ದೀಪಕ್ ಖೋಟ್, ರಿತುರಾಜ್ ವಿನಾಯಕ್ ಮತ್ತು ಸೌರಭ್ ವಿಕಾಸ್ ಕೊಲೆಗೈದಿದ್ದಾರೆ.
ದಾಳಿಕೋರರನ್ನು ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ್, ದೀಪಕ್ ನೇತಾಜಿ ಖೋಟ್, ಸಂದೀಪ್ ಶಂಕರ್ ಚವಾಣ್, ಋತುರಾಜ್ ವಿನಾಯಕ್ ಇನಾಮದಾರ್ ಮತ್ತು ಸೌರಭ್ ವಿಕಾಸ್ ಎಂದು ಗುರುತಿಸಲಾಗಿದೆ. ಕೊಲ್ಲಾಪುರ ಪೊಲೀಸರು ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
1993 ರ ಮಾರ್ಚ್ 12 ರಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ 28 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 50 ಮಂದಿ ಸಾವನ್ನಪ್ಪಿದರು. ಅರ್ಧ ಗಂಟೆಯ ನಂತರ, ಕಾರಿನಲ್ಲಿ ಎರಡನೇ ಸ್ಫೋಟ ಸಂಭವಿಸಿತು ಮತ್ತು ನಂತರ ಒಂದರ ನಂತರ ಒಂದರಂತೆ ಸರಣಿ ಸ್ಫೋಟಗಳು ಪ್ರಾರಂಭವಾದವು. ಎರಡು ಗಂಟೆಗಳಲ್ಲಿ ಮುಂಬೈನ 12 ಸ್ಥಳಗಳಲ್ಲಿ 13 ಸ್ಫೋಟಗಳು ಸಂಭವಿಸಿವೆ. ಈ ಸರಣಿ ಸ್ಫೋಟಗಳಲ್ಲಿ 257 ಜನರು ಸಾವನ್ನಪ್ಪಿದ್ದರು ಮತ್ತು 713 ಜನರು ಗಾಯಗೊಂಡಿದ್ದರು.
Previous Articleಶಿವಕುಮಾರ್ ನಮ್ಮ ಶಕ್ತಿ ತೋರಿಸುತ್ತೇವೆ ಎಂದಿದ್ದು ಯಾರಿಗೆ.?
Next Article ವಿಧಾನ ಪರಿಷತ್ ಗೆ ಅವಿರೋಧ ಆಯ್ಕೆ.