ಬೆಂಗಳೂರು,ಮೇ. 21-
ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜ ತಾಂತ್ರಿಕ ಪಾಸ್ ಪೋರ್ಟ್ ರಂದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪೆನ್ ಡ್ರೈವ್ ಬಹಿರಂಗವಾಗುತ್ತಿದ್ದಂತೆ ಅವರು ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳಿದ್ದಾರೆ. ಅವರನ್ನು ಭಾರತಕ್ಕೆ ವಾಪಸ್ ಕರೆ ತರಲು ವಿಶೇಷ ತನಿಖಾ ತಂಡ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರ ಆಧರಿಸಿ, ವಿದೇಶಾಂಗ ಇಲಾಖೆ ಕ್ರಮ ಕೈಗೊಂಡರೆ ಪ್ರಜ್ವಲ್ ಅವರ ಪಾಸ್ ಪೋರ್ಟ್ ರದ್ದಾಗಲಿದೆ ಹೀಗಾಗಿ ಅವರು ಸ್ವದೇಶಕ್ಕೆ ಮರಳುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಬಂದು ತನಿಖೆ ತಂಡದ ಮುಂದೆ ಶರಣಾಗುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಮನವಿ ಅವರ ಆಂತರಿಕ ವಿಚಾರವಾಗಿದೆ ಈ ವಿಷಯದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಬದಲಿಗೆ ಕಾನೂನಿನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಯಾರ ಟೆಲಿಫೋನ್ ಗಳನ್ನು ಕದ್ದಾಲಿಕೆ ಮಾಡುತ್ತಿಲ್ಲ ಟೆಲಿಫೋನ್ ಟ್ರಾಪ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಅದಕ್ಕೆ ತನ್ನದೇ ಆದ ಕಾನೂನಿನ ಪ್ರಕ್ರಿಯೆಗಳಿವೆ ಎಂದು ಸ್ಪಷ್ಟಪಡಿಸಿದ ಅವರು ಇಷ್ಟಾಗಿಯೂ ತಮ್ಮ ಫೋನ್ ಟ್ರಾಪ್ ಮಾಡಲಾಗುತ್ತಿದೆ ಎಂಬ ದಾಖಲೆಗಳಿದ್ದರೆ ಅದನ್ನು ಕೊಟ್ಟು ದೂರು ನೀಡಿದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ವಕೀಲ ದೇವರಾಜೇ ಗೌಡ ಅವರ ವಿರುದ್ಧದ ಪ್ರಕರಣದ ಬಗ್ಗೆ ಎಸ್ಐಟಿ ನೋಡಿಕೊಳ್ಳಲಿದೆ ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿಗೆ ಸಿಎಂ ಪತ್ರ.
Previous Articleರಾಜ್ಯದಲ್ಲಿ ಮತ್ತೊಂದು ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.
Next Article ರಾಮೇಶ್ವರಂ ಕೆಫೆ ಸ್ಪೋಟ -ಎನ್ಐಎ ಮಿಂಚಿನ ದಾಳಿ.