ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್.?
ಬೆಂಗಳೂರು,ಮೇ.16
ಲೈಂಗಿಕ ಕಿರುಕುಳ ಆರೋಪದ ಸುಳಿಯಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪತ್ತೆಹಚ್ಚಲು ವಿಫಲವಾಗಿರುವ ವಿಶೇಷ ತನಿಖೆ ತಂಡ ಇದೀಗ ಅವರ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಕುರಿತಂತೆ ಚರ್ಚೆ ಆರಂಭಿಸಿದೆ.
ವಿಶೇಷ ತನಿಖಾ ತಂಡದ ಅಧಿಕಾರಿಗಳು ಈ ಸಂಬಂಧ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು ಲಭ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿ ಪ್ರಜ್ವಲ್ ಅವರನ್ನು ಕರೆತರಲು ಸಿದ್ಧತೆ ನಡೆಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಪೆನ್ ಡ್ರೈವ್ ಗಳು ಬಹಿರಂಗಗೊಂಡ ಕೂಡಲೆ ವಿದೇಶಕ್ಕೆ ತೆರಳಿರುವ ಪ್ರಜ್ವಲ್ ರೇವಣ್ಣ ಇಲ್ಲಿಯವರೆಗೆ ಸ್ವದೇಶಕ್ಕೆ ಮರಳುವ ಕುರಿತಂತೆ ಯಾವುದೇ ಲಕ್ಷಣಗಳು ಗೋಚರಿಸಿಲ್ಲ.
ಕಳೆದ 20 ದಿನಗಳಿಂದ ಪ್ರಜ್ವಲ್ ರೇವಣ್ಣ ಎಸ್ಐಟಿ ಅಧಿಕಾರಿಗಳೊಂದಿಗೆ ಕಣ್ಣಾಮುಚ್ಚಾಲೆಯ ಆಟ ಆಡುತ್ತಿದ್ದಾರೆ. ಭಾರತಕ್ಕೆ ಹಿಂದಿರುಗಲು ಮೇ 3 ರಿಂದ ನಿನ್ನೆ 15ರ ವರೆಗೆ 5 ಭಾರಿ ವಿಮಾನ ಟಿಕೆಟ್ ಬುಕ್ ಆಗಿ ಕೊನೆಕ್ಷಣಗಳಲ್ಲಿ ರದ್ದಾಗಿವೆ. ಇತ್ತ ಪ್ರಜ್ವಲ್ ರೇವಣ್ಣ ಹಿಂದಿರುಗುತ್ತಾರೆ ಎಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಎಸ್ಐಟಿ ಅಧಿಕಾರಿಗಳ ನಿರೀಕ್ಷೆ ಹುಸಿಯಾಗಿದೆ.
ಈಗಾಗಲೇ ಪ್ರಜ್ವಲ್ ಅವರು ವಿಚಾರಣೆಗೆ ಹಾಜರಾಗಬೇಕೆಂದು ಮೊದಲು ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ನಂತರ ಲುಕ್ಔಟ್ ನೋಟಿಸ್ ಜಾರಿ ಗೊಳಿಸಲಾಗಿತ್ತು. ಆಮೇಲೆ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಪ್ರಜ್ವಲ್ ಅವರನ್ನು ಸ್ವದೇಶಕ್ಕೆ ಕರೆತರಲು ಇರುವ ಏಕೈಕ ಮಾರ್ಗವೆಂದರೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾತ್ರ. ಹೀಗಾಗಿ ಎಸ್ಐಟಿ ಈ ಬಗ್ಗೆ ಪರಿಶೀಲನೆ ಆರಂಭಿಸಿದೆ
ಬಿಜೆಪಿ ಕಾರ್ಯಕರ್ತನ ಬಳಿ ಪತ್ತೆ:
ಇನ್ನು ಪೆನ್ ಡ್ರೈವ್ ಹಂಚಿರುವ ಕುರಿತಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ಹಾಸನದ 18 ಕಡೆ ನಡೆಸಿದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬಿಜೆಪಿಯ ಮಾಜಿ ಶಾಸಕ ಪ್ರೀತಮ್ ಗೌಡ ಅವರ ಆಪ್ತನ ಮನೆಯಲ್ಲಿ 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್, ನಾಲ್ಕು ಲ್ಯಾಪ್ ಟಾಪ್, ಮೂರು ಡೆಸ್ಕ್ ಟಾಪ್ ವಶಕ್ಕೆ ಪಡೆದಿದೆ. ದಾಳಿ ನಡೆಸಿದ ಕಡೆಯಲ್ಲಿ ಸಿಕ್ಕ ಸಿಸಿ ಕ್ಯಾಮರಾಗಳ ದೃಶ್ಯಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್ ಡಿಸ್ಕ್ಗಳಲ್ಲಿರುವ ವಿಡಿಯೋಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ವಿಡಿಯೋಗಳನ್ನು ಪೆನ್ ಡ್ರೈವ್, ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ಗೆ ಕಾಪಿ ಮಾಡಿ ನಂತರ ಬೇರೆಯವರಿಗೆ ಹಂಚಿರುವ ಆರೋಪವಿದೆ
ಬಂಧನ ಯಾಕಿಲ್ಲ:
ಪೆನ್‌ಡ್ರೈವ್ ಪ್ರಕರಣವನ್ನು ಉದ್ದೇಶಪೂರಕವಾಗಿಯೇ ಮುಚ್ಚಿ ಹಾಕಲು ಸರ್ಕಾರ ಸಂಚು ರೂಪಿಸಿದೆ. ಮೊದಲು ಎಫ್‌ಐಆರ್ ಆದಾಗಲೂ ಪ್ರಜ್ವಲ್ ರೇವಣ್ಣ ಅವರನ್ನು ಏಕೆ ಬಂಧಿಸಲಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಶ್ವತ ನಾರಾಯಣನಿಮಗೆ ನಿಜವಾಗಿಯೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದಿದ್ದರೆ ನಿಸ್ಪಕ್ಷಪಾತ ತನಿಖೆ ನಡೆಸಬೇಕಿತ್ತು. ಎಸ್‌ಐಟಿ ರಚನೆಯಾಗುತ್ತಿದ್ದಂತೆ ಹೊರದೇಶಕ್ಕೆ ಹೋಗಬಹುದೆಂಬ ಸೂಕ್ಷ್ಮತೆ ಗುಪ್ತಚರ ಇಲಾಖೆಗೆ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಅವರನ್ನು ಹೊರದೇಶಕ್ಕೆ ಕಳುಹಿಸಿಕೊಡಲು ಸರ್ಕಾರವೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿತ್ತು. ಈಗ ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮತದಾನ ಮುಗಿದ ಮೇಲೆ ಈ ಪ್ರಕರಣದ ಬಗ್ಗೆ ಯಾರಿಗೂ ಗಂಭೀರತೆ ಇಲ್ಲ ಎಂದು ಹೇಳಿದರು.