ಬಳ್ಳಾರಿ,ಸೆ.11:
ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ದಿನ ದೂಡುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಐಷಾರಾಮಿ ಸೌಲಭ್ಯ ಪಡೆದ ಆರೋಪದಲ್ಲಿ ಅವರನ್ನು ಇದೀಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.
ಆರಂಭದಲ್ಲಿ ಇಲ್ಲಿನ ಸೌಲಭ್ಯಗಳಿಗೆ ಹೊಂದಿಕೊಳ್ಳಲಾಗದೆ ಪರದಾಡಿದ ದರ್ಶನ್ ಇದೀಗ ನಿಧಾನವಾಗಿ ಬಳ್ಳಾರಿ ಜೈಲಿನ ನಿಯಮಗಳಿಗೆ ಹೊಂದಿಕೊಳ್ಳುತ್ತಿದ್ದಾರೆ.
ದರ್ಶನ್ ಕುಟುಂಬ ಸದಸ್ಯರ ಜೊತೆ ಮಾತನಾಡಲು ಅವರ ಸೆಲ್ ಗೆ ಸ್ಥಿರ ದೂರವಾಣಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪತ್ನಿ ವಿಜಯಲಕ್ಷ್ಮೀ ಜೊತೆ ದರ್ಶನ್ ಕೆಲ ಹೊತ್ತು ಮಾತನಾಡಿದ್ದಾರೆ.
ಈ ಹಿಂದೆ ಜೈಲು ಸಭಾಂಗಣಕ್ಕೆ ನಟ ದರ್ಶನ್ ಆಗಮಿಸಿ ಕರೆ ಮಾಡಬೇಕಿತ್ತು. ಸಾಮಾನ್ಯ ಕೈದಿಗಳು ಇರುವ ಬ್ಯಾರಕ್ ಪಕ್ಕದಲ್ಲಿಯೇ ಫೋನ್ ವ್ಯವಸ್ಥೆಯಿತ್ತು. ಇತರೆ ಕೈದಿಗಳನ್ನು ಭೇಟಿಯಾಗಲು ಆಗಮಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಕಿರಿಕಿರಿಯಾಗುತ್ತಿದೆ ಎಂಬ ಕಾರಣಕ್ಕೆ ಫೋನ್ ವ್ಯವಸ್ಥೆ ಹೈಸೆಕ್ಯೂರಿಟಿ ಸೆಲ್‌ನಲ್ಲಿಯೇ ಕಲ್ಪಿಸಲಾಗಿದೆ.
ಜಾಮೀನು ಕುರಿತು ವಕೀಲರ ಜೊತೆ ಚರ್ಚಿಸಲು ಹಾಗೂ ಕುಟುಂಬ ಸದಸ್ಯರ ಜೊತೆ ಮಾತನಾಡಲು ಅನುಕೂಲ ವಾದಂತಾಗಿದೆ. ಜೈಲು ಸೇರಿದ ಕೆಲ ದಿನ ಊಟ ಹಾಗೂ ಉಪಹಾರ ಸರಿಯಾಗಿ ಸೇವಿಸದೆ ಮಂಕಾಗಿದ್ದ ದರ್ಶನ್ ಇದೀಗ ಸಾಮಾನ್ಯ ಕೈದಿ ಗಳಂತೆಯೇ ಊಟ ಹಾಗೂ ಉಪಹಾರ ಸೇವಿಸುತ್ತಿದ್ದಾರೆ.
ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಗೊಂಡು 14 ದಿನಗಳಾಗಿದೆ.
ಜೈಲಿನಲ್ಲಿ ತಮಗೆ ಬೇಜಾರಾಗುತ್ತಿದೆ ಹೀಗಾಗಿ ನೋಡಲು ಟಿವಿ ನೀಡುವಂತೆ ಮನವೀ ಮಾಡಿದ್ದರು. ಜೈಲಿನಲ್ಲಿ ಖೈದಿಗಳಿಗೆ ವೀಕ್ಷಿಸಲು ಟಿವಿ ವ್ಯವಸ್ಥೆ ಇದೆ ಆದರೆ ಅಲ್ಲಿ ಇತರೆ ಎಲ್ಲಾ ಖೈದಿಗಳು ಸೇರುವ ಹಿನ್ನೆಲೆಯಲ್ಲಿ ದರ್ಶನ್ ಅಲ್ಲಿಗೆ ಹೋಗಿ ನೋಡಲು ಸಾಧ್ಯವಿರಲಿಲ್ಲ ಹೀಗಾಗಿ ಅವರು ಪ್ರತ್ಯೇಕ ಟಿವಿಗಾಗಿ ಮನವಿ ಮಾಡಿದ್ದರು.
ಅವರು ಮಾಡಿದ ಮನವಿಯಂತೆ ಜೈಲಿನ ನಿಯಮಗಳ ಪ್ರಕಾರ ದರ್ಶನ್‌ಗೆ ಟಿವಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ನೀಡಿದ್ದ ಟಿವಿಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಪದೇ ಪದೇ ಸ್ವಿಚ್ ಆಫ್ ಆಗುತ್ತಿತ್ತು ಮತ್ತು ಬ್ಲರ್ ಆಗಿ ಚಿತ್ರಗಳು ಕಾಣುತ್ತಿದ್ದವು.
ಇದನ್ನು ರಿಪೇರಿ ಮಾಡಿ ಕೊಡಿ ಎಂದು ದರ್ಶನ್ ಮನವಿ ಮಾಡಿದ್ದರು. ಆದರೆ ನಮ್ಮಲ್ಲಿ ಇರುವುದು ಇದೇ ಟಿವಿ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ದರ್ಶನ್ ಬೇರೆ ಟಿವಿ ಇದ್ದರೆ ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ಮನವಿಗೆ ಜೈಲಾಧಿಕಾರಿಗಳು ಬೇರೆ ಟಿವಿ ಇಲ್ಲ ಎಂದು ಉತ್ತರಿಸಿದಾಗ ನನಗೆ ಟಿವಿಯೇ ಬೇಡ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ಹೇಗಿದ್ದಾರೆ ಗೊತ್ತಾ.
Previous Articleಜೈಲಿನಲ್ಲಿ ಖೈದಿ ಉಪವಾಸ ಸತ್ಯಾಗ್ರಹ.
Next Article ಸಿಎಂ ಬೆಂಬಲಕ್ಕೆ ನಿಂತ ಪ್ರತಾಪ ಸಿಂಹ.