\ಬೆಂಗಳೂರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಎಲ್ಲಾ ವರ್ಗದ ಜನರನ್ನೂ ಸೆಳೆಯುವ ದೃಷ್ಟಿಯಿಂದ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಮೃದು ಹಿಂದುತ್ವ ಧೋರಣೆಯತ್ತ ಗಮನ ಕೇಂದ್ರೀಕರಿಸತೊಡಗಿದೆ.
ವಾರಣಾಸಿಯಲ್ಲಿ ನಡೆಯಲಿರುವ ಗಂಗಾರತಿ ಮಾದರಿಯಲ್ಲಿ ರಾಜ್ಯದ ಪ್ರಮುಖ ನದಿಗಳಾದ ಕಾವೇರಿ ಮತ್ತು ತುಂಗಭದ್ರ ನದಿಗಳಲ್ಲೂ ಆರತಿ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ.
ಇದರ ಜೊತೆಗೆ ಈಗ ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸುತ್ತಿರುವ ಜೀವನದಿ ಕಾವೇರಿಯನ್ನು ಪೂಜಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯಲಿರುವ ‘ಗಂಗಾರತಿ’ ಮಾದರಿಯಲ್ಲೇ ಈ ಕಾರ್ಯಕ್ರಮವೂ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದಿಂದ ಪುರೋಹಿತರನ್ನು ಕರೆಸಲು ತೀರ್ಮಾನಿಸಲಾಗಿದೆ.
ಜೀವನದಿ ಕಾವೇರಿಯ ಉಪನದಿಗಳಲ್ಲಿ ವೃಷಭಾವತಿ ನದಿ ಕೂಡ ಒಂದು ಈ ವೃಷಭಾವತಿಯು ಬೆಂಗಳೂರಿನ ಸ್ಯಾಂಕಿ ಕೆರೆಯಿಂದ ಉಗಮವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ನದಿ ಉಗಮ ಸ್ಥಾನದಲ್ಲಿ ಜಲಗಂಗಮ್ಮ ದೇವಾಲಯ ನಿರ್ಮಾಣ ಮಾಡಲಾಗಿದೆ.ಹೀಗಾಗಿ ಸ್ಯಾಂಕಿ ಕೆರೆಯಲ್ಲಿ ಬೆಂಗಳೂರು ಜಲಮಂಡಳಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಿದೆ.
ಉದ್ಯಾನ ನಗರಿಯ ಮುಕ್ಕಾಲು ಪಾಲು ಜನರಿಗೆ ಜೀವ ಜಲ ಪೂರೈಸುವ ಕಾವೇರಿ ನದಿಗೆ ಈ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಜಲ ಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೌಕರರ ಕುಟುಂಬಗಳು ಹಾಗೂ ಸಾರ್ವಜನಿಕರು ಸೇರಿ 10 ಸಾವಿರಕ್ಕೂ ಅಧಿಕ ಜನರು ಕಾವೇರಿ ಆರತಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸುವ ಸಾಧ್ಯತೆ ಇದೆ.ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ಮತ್ತು ವಿಶೇಷ ಪೂಜೆ ನಡೆಯಲಿದೆ ಎಂದು ವಿವರಿಸಿದ್ದಾರೆ.
Previous Articleಇಲವಾಲ ಚಿನ್ನ ದರೋಡೆಯ ಉರುಳು ಯಾರ ಕೊರಳಿಗೆ.?
Next Article ಶಾಂತಿ ಪೂಜೆಗೆ ಬಂದು ಕೋಟಿ ಲಪಟಾಯಿಸಿದ