ಬೆಂಗಳೂರು, ಜೂ.21- ಕರ್ನಾಟಕದ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ 52 ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಆದೇಶಿಸಲಾಗಿದೆ.
ಈ ಕುರಿತು ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಈ ಆದೇಶವನ್ನು ಬುಧವಾರ ಹೊರಡಿಸಿದ್ದಾರೆ. 545 ಪಿಎಸ್‌ಐ ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು.
2021 ಅಕ್ಟೋಬರ್ 3 ರಂದು ಪಿಎಸ್‌ಐ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ದೂರು ಕೇಳಿ ಬಂದಿದ್ದರಿಂದ ಸಿಐಡಿ ಇದರ ತನಿಖೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಡಿಬಾರ್ ಮಾಡುವ ಮುನ್ನ ಈ 52 ಜನರ ಬಳಿ ಸ್ಪಷ್ಟನೆ ಕೇಳಲಾಗಿತ್ತು. ಸ್ಪಷ್ಟನೆ ಪಡೆದ ನಂತರವೇ ಈ ಎಲ್ಲ 52 ಅಭ್ಯರ್ಥಿಗಳನ್ನು ನೇಮಕಾತಿ ಪರೀಕ್ಷೆಗಳಿಂದ ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ ಎಂದು ಡಿಜಿಪಿ (ನೇಮಕಾತಿ) ಅವರ ಆದೇಶ ಹೇಳಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು 52 ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದು, ಇವರನ್ನುಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿಷೇಧಿಸಲಾಗಿದೆ.
ಬೆಂಗಳೂರು ನಗರ, ಕಲಬುರಗಿ, ಹುಬ್ಬಳ್ಳಿ– ಧಾರವಾಡ ನಗರ, ತುಮಕೂರು ನಗರ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದವು. ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಪತ್ರಿಕೆ-1ರಲ್ಲಿ ಕೆಲ ಅಭ್ಯರ್ಥಿಗಳು ಬ್ಲೂಟೂತ್, ಇತರೆ ಎಲೆಕ್ಟ್ರಾನಿಕ್ ಸಾಧನ ಬಳಸಿ ಅಕ್ರಮ ಎಸಗಿದ್ದು ಬೆಳಕಿಗೆ ಬಂದಿತ್ತು. ಕೆಲವು ಅಭ್ಯರ್ಥಿಗಳು ಓಎಂಆರ್ ಶೀಟ್‌ಗಳನ್ನೇ ತಿದ್ದುಪಡಿ ಮಾಡಿಸಿಕೊಂಡಿರುವುದು ದೃಢವಾಗಿದ್ದರಿಂದ ಅಂಥಹ ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
1977ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ-20ರಲ್ಲಿ ಉಲ್ಲೇಖಿಸಿದಂತೆ 52 ಅಭ್ಯರ್ಥಿಗಳು ದುರ್ನಡತೆ ತೋರಿದ್ದಾರೆ. ನಕಲಿ ವ್ಯಕ್ತಿಗಳು, ಸುಳ್ಳು ಹೇಳಿಕೆ, ವಾಸ್ತವ ಮಾಹಿತಿ ಮರೆಮಾಚಿರುತ್ತಾರೆ. ನೇಮಕಾತಿ ಸಮಿತಿ ನೀಡಿರುವ ಸೂಚನೆಗಳನ್ನು ಪರೀಕ್ಷಾ ಕೊಠಡಿಯಲ್ಲಿ ಉಲ್ಲಂಘಿಸಿ ನಕಲು ಮಾಡಿರುವುದನ್ನು ದುರ್ನಡತೆ ಎಂದು ನಿರ್ಧರಿಸಲಾಗಿದೆ ಎಂದು ನೇಮಕಾತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಡಿಬಾರ್ ಆದ ಅಭ್ಯರ್ಥಿಗಳಲ್ಲಿ 10 ಮಂದಿ ಕಾನ್‌ಸ್ಟೇಬಲ್‌ಗಳಿದ್ದು ಅವರ ಪೊಲೀಸ್ ಸೇವೆಗೂ ಕುತ್ತು ಬಂದಿದೆ. ಅಲ್ಲದೆ, 402 ಎಸ್ಎಐ ಹುದ್ದೆಗಳ ನೇಮಕಾತಿಗೂ ಇವರು ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆ ಮುಗಿದಿದ್ದು, ಲಿಖಿತ ಪರೀಕ್ಷೆಯಿಂದ ಅಂಥವರನ್ನ ಹೊರಹಾಕಲಾಗಿದೆ.
ಡಿಬಾರ್ ಆದ ಅಭ್ಯರ್ಥಿಗಳು:
ಎಸ್. ಜಾಗೃತ್, ಬಿ. ಗಜೇಂದ್ರ, ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ, ಎಚ್.ಯು. ರಘುವೀರ್, ಎಂ.ಸಿ. ಚೇತನ್‌ಕುಮಾರ್, ಬಿ.ಸಿ. ವೆಂಕಟೇಶ್ ಗೌಡ, ಎ.ಪಿ. ಮನೋಜ್, ಜಿ.ಆರ್. ಮಂಜುನಾಥ್, ಪಿ. ಸಿದ್ದಲಿಂಗಪ್ಪ, ಎಸ್.ಮಮತೇಶ್ ಗೌಡ, ಎಚ್. ಯಶವಂತ್‌ಗೌಡ, ಸಿ.ಎಂ.ನಾರಾಯಣ, ಸಿ. ಎಸ್. ನಾಗೇಶ್ ಗೌಡ, ಆರ್. ಮಧು, ಸಿ. ಯಶವಂತ ದೀಪ್, ಸಿ.ಕೆ. ದಿಲೀಪ್‌ಕುಮಾರ್, ರಚನ ಹಣಮಂತ್, ಜಿ. ಶಿವರಾಜ್, ಸಿ. ಪ್ರವೀಣ್‌ಕುಮಾರ್, ಕೆ. ಸೂರ್ಯನಾರಾಯಣ, ಸಿ.ಎಂ. ನಾಗರಾಜ್, ಜಿ.ಸಿ. ರಾಘವೇಂದ್ರ, ಬೀರಪ್ಪ ಮೇತಿ, ಎಚ್. ಮೋಹನ್‌ಕುಮಾರ್, ಎನ್. ದಿಲೀಪ್‌ಕುಮಾರ್, ದರ್ಶನ್‌ಗೌಡ, ಲಕ್ಕಪ್ಪ ರಾವುತಪ್ಪ, ಎಚ್.ಬಿ. ಹರೀಶ್, ಜೆ. ಕುಶಾಲ್‌ಕುಮಾರ್, ವೀರೇಶ್, ಎನ್. ಚೇತನ್, ಕೆ. ಪ್ರವೀಣ್‌ಕುಮಾರ್, ಅರುಣ್‌ಕುಮಾರ್, ವಿಶಾಲ್, ಎಚ್.ವಿ. ಸುನೀಲ್, ಎಚ್.ಎನ್. ದೇಸಾಯಿ, ಶ್ರೀಧರ್, ಶಾಂತಿಬಾಯಿ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ಸುಪ್ರೀಯ ಹುಂಡೆಕರ್, ಪ್ರಭು ಇಟ್ಟಗರ್, ವಿಜಯಕುಮಾರ್ ಪೂಜಾರಿ, ಇಸ್ಮಾಲ್ ಖಾದಿರ್, ಯಶವಂತ ಮಾನೆ, ಎಸ್. ಶರಣಪ್ಪ ಪಾಟೀಲ್, ಬಿ. ಜೋಗೂರ್, ಸೋಮನಾಥ್, ಶ್ರೀಮಂತ ಸತ್ತಾಪುರ್, ರವಿರಾಜ್, ಪೀರಪ್ಪ ಮತ್ತು ಶ್ರೀಶೈಲಾ.
Previous Articleಪ್ರಿಯತಮೆಯನ್ನು ಕೊಂದು ಸುಟ್ಟುಹಾಕಿದ
Next Article Modiಗೆ ಅಮೆರಿಕಾದಲ್ಲಿ ಸ್ವಾಗತದ ಸವಿ ಪ್ರತಿಭಟನೆಯ ಬಿಸಿ