ಅಮೆರಿಕಾ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರಿಗೆ ಅಮೆರಿಕಾದ ಅಧ್ಯಕ್ಷರು ಕೆಲವೇ ಜಾಗತಿಕ ನಾಯಕರಿಗಾಗಿ ಮೀಸಲಿಟ್ಟ ಅಭೂತಪೂರ್ವವೆಂದೇ ಬಣ್ಣಿಸಲಾಗಿರುವ ಅದ್ದೂರಿ ಸ್ವಾಗತವನ್ನು ನೀಡಿದ್ದಾರೆ. ಅಮೆರಿಕಾದಲ್ಲಿ ಮೋದಿಯವರನ್ನು ವಿಶೇಷ ಆದರಾತಿಥ್ಯಗಳೊಂದಿಗೆ ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತಿದೆ. ಆದರೆ ಮೋದಿಯವರ ಭೇಟಿ ನಿರ್ಧರಿಸಲಾದಂದಿನಿಂದಲೇ ನಿರೀಕ್ಷಿಸಲ್ಪಟ್ಟಂತೆ ಮೋದಿಯವರ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದಿವೆ. ಆ ಪ್ರತಿಭಟನೆಗಳು ಅನಿವಾಸಿ ಭಾರತೀಯರು, ಮುಸಲ್ಮಾನರು ಮಣಿಪುರಿಗಳು ಮತ್ತು ಅಮೆರಿಕನ್ನರಿಂದಲೂ ಆಯೋಜಿಸಲ್ಪಟ್ಟಿವೆ.
ಮೋದಿಯವರನ್ನು ಕಟುವಾಗಿ ಟೀಕಿಸಿರುವ ಈ ಪ್ರತಿಭಟನಾಕಾರರು ಮೋದಿಯವರ ರಾಜಕೀಯ ಇತಿಹಾಸ ಮತ್ತು ಅವರ ಬಲಪಂಥೀಯ ಸರ್ಕಾರದ ನಡವಳಿಕೆಗಳನ್ನೂ ಪ್ರಶ್ನಿಸಿವೆ. ಅನೇಕ ಪ್ರತಿಭಟನಾಕಾರರು ಮೋದಿಯವರನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ಕಟುವಾಗಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ ಭೇಟಿಯ ಸಂದರ್ಭದಲ್ಲಿ ಅಮೆರಿಕಾದ ನ್ಯೂ ಯಾರ್ಕ್ ನಗರದಲ್ಲಿ ಟ್ರಕ್ ಗಳ ಮೇಲೆ ಅಳವಡಿಸಿದ ಡಿಜಿಟಲ್ ಪರದೆಗಳಲ್ಲಿ ಮೋದಿಯವರ ವಿರುದ್ಧ ಘೋಷವಾಕ್ಯಗಳೊಂದಿಗೆ ಅವರ ಸರ್ಕಾರವನ್ನೂ ಟೀಕಿಸಲಾಗಿತ್ತು. ಈ ಟ್ರಕ್ ಗಳು ನ್ಯೂಯಾರ್ಕ್ ನಗರದಲ್ಲೆಲ್ಲ ಓಡಾಡಿ ಜನರ ಗಮನ ಸೆಳೆದಿವೆ.
ಹಾಗೇ ಅಮೆರಿಕಾದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮೋದಿಯವರು ಪಾಲ್ಗೊಳ್ಳುವಾಗ ಅದನ್ನು ಬಹಿಷ್ಕರಿಸಲು ನಾಲ್ಕು ಮಂದಿ ಸಂಸತ್ ಸದಸ್ಯರು ನಿರ್ಧರಿಸಿದ್ದಾರೆ. ಶಾಸನ ಸಭೆಯ ಸದಸ್ಯರಾದ ಇಲ್ಹಾನ್ ಒಮರ್, ರಶೀದಾ ತ್ಲ್ಯಾಯ್ಬ್, ಅಲೆಕ್ಸಾಂಡ್ರಿಯಾ ಕಾರ್ಟೆಜ್ ಮತ್ತು ಕೋರಿ ಬುಷ್ ಮೋದಿಯವರು ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಬಾರದು ಎಂದಿದ್ದಾರೆ. ಹಾಗೇ ಅನೇಕ ಪತ್ರಕರ್ತರು ಚಿಂತಕರು ಮತ್ತು ಸಮಾಜಿಕ ಕಾರ್ಯಕರ್ತರೂ ಕೂಡ ಈ ಪ್ರತಿಭಟನೆಯ ಭಾಗಿಯಾಗಿದ್ದಾರೆ.
ಅನೇಕ ಪ್ರತಿಭಟನಾಕಾರರು ತಾವು ಹಿಂದೂ ವಿರೋಧಿಗಳಲ್ಲ ಮತ್ತು ಭಾರತ ವಿರೋಧಿಗಳೂ ಅಲ್ಲ ನಾವು ಬರಿ ಮೋದಿಯವರ ವಿರೋಧಿಗಳು ಎಂದು ತಮ್ಮ ಪ್ರತಿಭಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಮುಖವಾಗಿ ಭಾರತೀಯ ಪ್ರಧಾನ ಮಂತ್ರಿಯವರನ್ನು#crimeministerofindia ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಜೋಡಿಸಿ ಟೀಕಿಸುತ್ತಿದ್ದಾರೆ. ಇವೆಲ್ಲ ನಡೆಯುತ್ತಿದ್ದರೂ ಮೋದಿಯವರು ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಅಡೆತಡೆಯಿಲ್ಲದೆ ನಿರ್ವಹಿಸಿ ತಮ್ಮ ಅಮೆರಿಕಾ ಭೇಟಿಯನ್ನು ಯಶಸ್ವಿ ಗೊಳಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ.