ಸಾಮಾನ್ಯವಾಗಿ ರೈತರು ಬೆಳೆಯುವ ಮಾವಿನ ಹಣ್ಣುಗಳು 100 ರಿಂದ 300 ಗ್ರಾಂ ಇರುತ್ತವೆ. ಹೆಚ್ಚೆಂದರೆ 500 ಗ್ರಾಂ ಬರಬಹುದು. ಆದರೆ, ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ಬೆಳೆಯುವ ಮಾವಿನ ಹಣ್ಣು ಬರೋಬ್ಬರಿ 4 ಕೆಜಿ ವರೆಗೂ ಬರಲಿದ್ದು, ತಿಂಗಳಿಗೆ ಮುಂಚೆಯೇ ಬುಕ್ಕಿಂಗ್ ಶುರುವಾಗಿದೆ.
ಮಧ್ಯಪ್ರದೇಶದ ಕಥ್ಥಿವಾಡ ಪ್ರದೇಶದಲ್ಲಿ ಬೆಳೆಯಲಾಗುವ ಈ ವಿಶೇಷ ತಳಿಯ ಮಾವಿನ ಹಣ್ಣು ಗರಿಷ್ಠ 4 ಕೆಜಿ ವರೆಗೂ ಇರಲಿದೆ. ಅತ್ಯಂತ ಸಿಹಿಯಾಗಿರುವ ಈ ಮಾವಿನ ಹಣ್ಣು ಗಾತ್ರದಷ್ಟೇ ದುಬಾರಿ ದರವೂ ಹೊಂದಿದ್ದು, 1 ರಿಂದ 2 ಸಾವಿರ ರೂ. ವರೆಗೆ ಮಾರಾಟವಾಗುತ್ತದೆ
ಅಫ್ಘಾನಿಸ್ತಾನ ಮೂಲದ ನೂರ್‌ಜಹಾನ್ ಎಂಬ ಮಾವಿನ ತಳಿಯ ಹಣ್ಣು 1 ಅಡಿ ಉದ್ದ ಮತ್ತು 4 ಕೆಜಿ ತೂಕವಿರಲಿದೆ. ಜನವರಿ-ಫೆಬ್ರವರಿ ವೇಳೆ ಈ ಮರಗಳಲ್ಲಿ ಹೂವು ಬಿಡಲು ಪ್ರಾರಂಭವಾಗುತ್ತವೆ. ಜೂನ್ ಮೊದಲ ವಾರದ ವರೆಗೆ ಹಣ್ಣು ಬಲಿತು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತವೆ. ಆದರೆ, ದುಬಾರಿ ಹವಾಮಾನ ವೈಪರಿತ್ಯದಿಂದಾಗಿ ಮರಗಳಲ್ಲಿ ಈ ಬಾರಿ ಕಾಯಿ ಕಡಿಮೆಯಾಗಿದೆ. ಹಣ್ಣಾಗುವ ಮೊದಲೇ ಹೂವು ಉದುರಿಹೋಗಿದ್ದು, ಮೂರೇ ಮರಗಳಲ್ಲಿನ 250 ಕಾಯಿಗಳು ಉಳಿದಿವೆ.
ಕಳೆದ ವರ್ಷ ಪ್ರತಿ ಹಣ್ಣನ್ನು 500 ರಿಂದ 1,500ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವರ್ಷ 2 ಸಾವಿರ ರೂ. ವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಜೂನ್ ತಿಂಗಳ ವೇಳೆ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಇದಕ್ಕೆ ಆಕರ್ಷಿತರಾಗಿರುವ ಮಾವು ಪ್ರಿಯರು ತಿಂಗಳಿಗೆ ಮುಂಚಿತವಾಗಿಗೆ ಬುಕ್ಕಿಂಗ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಮಾವು ಬೆಳೆಗಾರ ಶಿವರಾಜ್ ಸಿಂಗ್ ಜಾದವ್ ಹೇಳಿದ್ದಾರೆ