ಬೆಂಗಳೂರು, ಮೇ 21:
ಲೋಕಸಭೆ ಮತ್ತು ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಂದು ಚುನಾವಣೆಗೆ ರಾಜ್ಯ ಸರ್ಕಾರ ಸಜ್ಜುಗೊಳ್ಳುತ್ತಿದೆ. ನೆನೆಗುದಿಗೆ ಬಿದ್ದಿರುವ ಜಿಲ್ಲಾ ತಾಲೂಕು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸಿದೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ
ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು, ಜನರ ಕೈಗೆ ಅಧಿಕಾರ ಹೋಗಲಿದೆ. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಈ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಪಂಡಿತ್ ನೆಹರು, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ಬೆಳೆದವರು ಹೀಗಾಗಿ ಸ್ಥಳೀಯ ಸಂಸ್ಥೆಗಳು ಪ್ರತಿ ವ್ಯಕ್ತಿಯ ರಾಜಕೀಯ ಬದುಕಿಗೆ ಬುನಾದಿ ಹಾಕಲಿವೆ ಎಂದು ಹೇಳಿದರು
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ
ಸಂಘಟನೆ ಬಲಗೊಳಿಸಬೇಕು. ಇದಕ್ಕಾಗಿ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ರಚಿಸುವ ಸಮಯ ಬಂದಿದೆ. ಎಂದು ಹೇಳಿದ ಅವರು ಸ್ಥಾನ ಮಾನಕ್ಕೂ ಮೊದಲು ಪಕ್ಷದ ಕೆಲಸ ಮಾಡಬೇಕು. ಕೇವಲ ಗುರುತಿನ ಚೀಟಿಗೋಸ್ಕರ ಬರುವವರು ಮನೆಯಲ್ಲಿಯೇ ಇರಿ. ಖಾದಿ ಬಟ್ಟೆ ಹಾಕಿಕೊಂಡು, ಕಾರು ಇಟ್ಟುಕೊಂಡು ಎಂಎಲ್ ಸಿ ಮಾಡಿ, ಅಧ್ಯಕ್ಷನನ್ನಾಗಿ ಮಾಡಿ ಎಂದರೆ ಅದು ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ
ಕೆಲಸ ಮಾಡುವವರಿಗೆ ಆದ್ಯತೆ. ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದು ನಾಯಕತ್ವಕ್ಕೆ ಬೇಡಿಕೆ ಇಡಬೇಕು. ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲು ಆಗದಿದ್ದರೆ ನಾವು ಬೇರೆಯವರನ್ನು ತಯಾರು ಮಾಡುತ್ತೇವೆ.ನಾನು ಎಷ್ಟು ದಿನ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದು ತಿಳಿಸಿದರು
ರಾಜ್ಯದಲ್ಲಿ ಮತ್ತೊಂದು ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.
Previous Articleಭಜರಂಗಿ ನಟಿ ಭೀಕರ ಹತ್ಯೆ.
Next Article ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿಗೆ ಸಿಎಂ ಪತ್ರ.