ಬೆಂಗಳೂರು,ಮೇ.9-
ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ನಿನ್ನೆ ರಾತ್ರಿ ಎಲ್ಲ ಕೈದಿಗಳಂತೆ ಜೈಲಿನ ಊಟ ಸೇವಿಸಿದ್ದಾರೆ.
ಕೆಲ ಹೊತ್ತು ಇಂದಿನ ಪತ್ರಿಕೆಗಳತ್ತ ಕಣ್ಣಾಡಿಸಿದವರು ಯಾರ ಜೊತೆಯೂ ಮಾತನಾಡದೆ ಮೌನವಾಗಿ ದಿನ ದೂಡಿದ್ದಾರೆ. ಕಳೆದ ರಾತ್ರಿ ಕೂಡ ತುಂಬಾ ಹೊತ್ತಿನವರೆಗೆ ನಿದ್ರಿಸದೆ ಮೌನಿಯಾಗಿ ಕುಳಿತು ಯೋಚಿಸುತ್ತಾ ಕಾಲ ಕಳೆದಿದ್ದಾರೆ.
ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆಯೇ ರೇವಣ್ಣಗೆ ವಿಚಾರಣಾಧೀನ ಬಂಧಿ 4567 ನಂಬರ್ ನೀಡಲಾಗಿದೆ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಊಟ ಸವಿಯಬೇಕಾದ ಪರಿಸ್ಥಿತಿ ಅವರದ್ದಾಗಿದೆ.
ಜೈಲಿನ ಮೆನುವಿನಂತೆಯೇ ಅಧಿಕಾರಿಗಳು ರಾತ್ರಿ ಚಪಾತಿ, ಪಲ್ಯ, ಮುದ್ದೆ, ಅನ್ನ, ಸಾಂಬಾರ್ ಊಟ ನೀಡಿದ್ದಾರೆ. ಕೋರ್ಟ್ ಅನುಮತಿ ಇದ್ದರೆ ಮಾತ್ರ ಹೊರಗಿನ ಊಟ ತರಿಸಲು ಅವಕಾಶವಿದೆ. ಆದರೆ ರೇವಣ್ಣಗೆ ಹೊರಗಿನ ಊಟಕ್ಕೆ ಯಾವುದೇ ಅನುಮತಿ ಇಲ್ಲ. ಆದರೆ ರಾತ್ರಿ ಊಟ ನೀಡಿ ಒಂದು ಗಂಟೆ ಕಳೆದರೂ ಊಟ ಮಾಡದೆ ರೇವಣ್ಣ ಮೌನಕ್ಕೆ ಜಾರಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವರಾಗಿ ಇಡೀ ಆಡಳಿತ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ರೇವಣ್ಣ ಐಷಾರಾಮಿ ಜೀವನ ನಡೆಸಿದವರು,ಆದರೆ ನಿನ್ನೆ ರಾತ್ರಿಯನ್ನು ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿ ಕಳೆದಿದ್ದು, ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್ ಸಾಂಬಾರ್ ತಡವಾಗಿ ತಿಂದಿದ್ದಾರೆ.
ಮನೆಯವರು ತಂದು ಕೊಟ್ಟಿರುವ ಬಟ್ಟೆ ಪಡೆದಿದ್ದಾರೆ. ರಾತ್ರಿ ಒಂದು ಗಂಟೆಯವರೆಗೂ ನಿದ್ರೆ ಮಾಡದೆ ಯೋಚಿಸುತ್ತಿದ್ದರು ಎನ್ನಲಾಗಿದೆ. ರೇವಣ್ಣ ಆರೋಗ್ಯ ಸರಿ ಇಲ್ಲದ ಕಾರಣ ಜೈಲಾಧಿಕಾರಿಗಳು ಹೆಚ್ಚು ನಿಗಾ ಇಟ್ಟಿದ್ದಾರೆ. ರೇವಣ್ಣ ಇರುವ ಕೊಠಡಿ ಬಳಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇಂದು ಬೆಳಿಗ್ಗೆ 5.30ಕ್ಕೆ ನಿದ್ರೆಯಿಂದ ಎದ್ದ ರೇವಣ್ಣ ಅವರಿಗೆ ಕಾಫಿ-ಟೀ ನೀಡಲಾಗಿದೆ. ಕೈದಿಗಳಿಗೆ ಟಿವಿ ವ್ಯವಸ್ಥೆ ಇಲ್ಲ. ಹೊರಗಿನ ಸುದ್ದಿ ತಿಳಿಯಲು ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದೆ. ರೇವಣ್ಣಗೆ ಓದಲು ಕನ್ನಡ-ಇಂಗ್ಲೀಷ್ ಪೇಪರ್ ನೀಡಲಾಗಿದೆ. ಪೇಪರ್ ಕಡೆ ಕಣ್ಣಾಡಿಸಿ ನಿನ್ನೆಯ ವಿದ್ಯಮಾನಗಳನ್ನು ರೇವಣ್ಣ ಓದಿದ್ದಾರೆ. ಜೈಲಿನ ಮೆನುವಿನಂತೆ ರೇವಣ್ಣಗೆ ಇಂದು ಬೆಳಗ್ಗಿನ ತಿಂಡಿಗೆ ಪುಳಿಯೋಗರೆ ನೀಡಲಾಗಿದೆ .
ಆದರೆ ರೇವಣ್ಣ ಅವರು ಪುಳಿಯೋಗರೆಯನ್ನು ಸೇವಿಸಿಲ್ಲ ಮಧ್ಯಾಹ್ನದ ವೇಳೆಗೆ ತಮಗೆ ಅತಿಯಾದ ಹೊಟ್ಟೆ ನೋವು ಎಂದು ನರಳ ತೊಡಗಿದರು. ತಕ್ಷಣವೇ ಅವರನ್ನು ಜೈಲಿನಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು.
ಅಪಹರಣ ಮಾಡಿದ ಆರೋಪ ಹೊತ್ತಿರುವ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಿನ್ನೆ ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.
1 ಟಿಪ್ಪಣಿ
речевое озвучивание речевое озвучивание .