ಬೆಂಗಳೂರು, ಜೂ. 1:
ಇಡೀ ದೇಶದಲ್ಲೇ ಕರ್ನಾಟಕ ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಲು ಅವರೇ ಕರೆಯುತ್ತಿದ್ದಾರೆ. ಈಗ ನಾವು ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ನಮ್ಮ ಜಾಹೀರಾತುಗಳ ಬಗ್ಗೆ ಬಿಜೆಪಿಯವರು ಖಾಸಗಿ ದೂರು ನೀಡಿದ್ದಾರೆ. ನಾವು ಸುಮ್ಮನೆ ಜಾಹೀರಾತು ನೀಡಿಲ್ಲ. ಬಿಜೆಪಿ ನಾಯಕರ, ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಹಿಂದಿನ ರಾಜ್ಯ ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿದ್ದೆವು. ಇದನ್ನೆಲ್ಲಾ ನಾವು ಸಾಬೀತು ಮಾಡುತ್ತೇವೆ ಎಂದು ಹೇಳಿದರು
ಕೇಂದ್ರದ ಮಾಜಿ ಸಚಿವ, ಶಾಸಕ ಯತ್ನಾಳ್ ಅವರೇ ತಮ್ಮ ಬಿಜೆಪಿ ಸರ್ಕಾರದ ಮೇಲೆ ಹಗರಣದ ಆರೋಪ ಮಾಡಿದ್ದರು. ಹಣ ನೀಡದೆ ಯಾವುದೇ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಸಾವಿರ ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ಎಂದು ಹೇಳಿಕೆ ನೀಡಿದವರು ಬಿಜೆಪಿಯವರೇ ಅಲ್ಲವೇ? ಎಂದು ಪ್ರಶ್ನಿಸಿದರು.
ಕಾಸಿದ್ದರೆ ಸರ್ಕಾರ ಹುದ್ದೆ ಎನ್ನುವ ಪತ್ರಿಕಾ ವರದಿಯ ಪ್ರಕಾರ, ಎ ದರ್ಜೆಯ ಗೆಜೆಟೆಡ್ ಹುದ್ದೆಗೆ 70 ಲಕ್ಷ. ಎಸಿಗೆ 1.50 ಕೋಟಿ, ಡಿವೈಎಸ್ ಪಿಗೆ 80 ಲಕ್ಷ, ತಹಶೀಲ್ದಾರ್ ಹುದ್ದೆಗೆ 60- 80 ಲಕ್ಷ, ಪೊಲೀಸ್ ಸನ್ ಇನ್ಸ್ ಪೆಕ್ಟರ್ ಹುದ್ದೆಗೆ 40 ಲಕ್ಷದಿಂದ 1.5 ಕೋಟಿ, ಅಸಿಸ್ಟೆಂಟ್ ಎಂಜಿನಿಯರ್ ಗೆ 80 ಲಕ್ಷ, ಸಹಾಯಕ ಅರಣ್ಯ ಅಧಿಕಾರಿಗೆ 50 ಲಕ್ಷ, ಎಸ್ ಡಿಎಗೆ 10 ರಿಂದ 15 ಲಕ್ಷ ರೂ. ಫಿಕ್ಸ್ ಆಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಆಧಾರದಲ್ಲಿ ಕಾಂಗ್ರೆಸ್ ಜಾಹೀರಾತು ನೀಡಿತ್ತು ಎಂದು ತಿಳಿಸಿದರು
ಬಿಜೆಪಿಯವರನ್ನು ಹೋಗಲಿ ಎಂದು ಸುಮ್ಮನೆ ಬಿಟ್ಟಿದ್ದೆವು. ಅವರೇ ದೂರು ನೀಡಿದ ಮೇಲೆ ಈಗ ಸುಮ್ಮನಿರಲು ಸಾಧ್ಯವೇ? ದೊಡ್ಡ ಹೆಸರು ಬರುತ್ತದೆ ಎಂದು ರಾಹುಲ್ ಗಾಂಧಿ ಹೆಸರು ಸೇರಿಸಿದ್ದಾರೆ. ಇಂಡಿಯಾ ಸಭೆ ಇದ್ದ ಕಾರಣ ರಾಹುಲ್ ಗಾಂಧಿ ಅವರು ಬರಲಾಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ನ್ಯಾಯಲಯಕ್ಕೆ ಬಂದಿದ್ದೇವೆ. ನಮ್ಮನ್ನು ರಾಜಕೀಯ ಮಾಡಲು ಬಿಜೆಪಿಯವರು ಕರೆಯುತ್ತಿದ್ದಾರೆ, ಅದನ್ನು ಮಾಡುತ್ತೇವೆ ಎಂದು ಹೇಳಿದರು
ಈ ಜಾಹೀರಾತು ಆಧರಿಸಿ ಬಿಜೆಪಿಯು ರಾಹುಲ್ ಗಾಂಧಿ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಹಾಗೂ ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ತಿಳಿದಿದೆ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ರಾಹುಲ್ ಗಾಂಧಿ ಅವರು ನ್ಯಾಯಲಯಕ್ಕೆ ಗೌರವ ನೀಡುತ್ತಾರೆ. ಹೀಗಾಗಿ ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ. ದಿನಾಂಕವನ್ನು ಮುಂದೆ ತಿಳಿಸುತ್ತೇನೆ” ಎಂದು ಉತ್ತರಿಸಿದರು.
ಶಿವಕುಮಾರ್ ನಮ್ಮ ಶಕ್ತಿ ತೋರಿಸುತ್ತೇವೆ ಎಂದಿದ್ದು ಯಾರಿಗೆ.?
Previous Articleಪ್ರಜ್ವಲ್ ಗೆ ವಿಡಿಯೋದಲ್ಲಿರೋರು ಯಾರು ಗೊತ್ತಿಲ್ಲವಂತೆ.
Next Article ಜೈಲಿನಲ್ಲೇ ಕೊಲೆಯಾದ ಪಾತಕಿ.