ಬೆಂಗಳೂರು,ಮೇ.11 ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಪ್ರಕರಣದ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸರು
ಬಂಧಿಸಿರುವ ವಕೀಲ ಹಾಗೂ ಬಿಜೆಪಿ ಮುಖಂಡ ಡಿ ದೇವರಾಜೇಗೌಡನನ್ನು ಹೊಳೆನರಸೀಪುರದ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕಾರಿನಲ್ಲಿ ನಿನ್ನೆ ರಾತ್ರಿ ಹೋಗುತ್ತಿದ್ದ ಬಿಜೆಪಿ ಮುಖಂಡ ಡಿ ದೇವರಾಜೇಗೌಡನನ್ನು ಚಿತ್ರದುರ್ಗದ ಕೆಅರ್ ಗೇಟ್ ಬಳಿ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ಹೊಳೆನರಸೀಪುರದ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದರು.
ವಶಕ್ಕೆ ತೆಗೆದುಕೊಂಡ ದೇವರಾಜೇಗೌಡರನ್ನು ಪೊಲೀಸರು ವಿಚಾರಣೆ ನಡೆಸತೊಡಗಿದ್ದಾರೆ. ದೇವರಾಜೇಗೌಡರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆಯ ದೂರನ್ನು ಅವರ ವಿರುದ್ಧ ದಾಖಲಿಸಿದ್ದರು. 2023 ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋತಿದ್ದ ದೇವರಾಜೇಗೌಡರು ಪ್ರಜ್ವಲ್ ರೇವಣ್ಣ ಅತ್ಯಾಚಾರ ಟೇಪುಗಳು ಸಾರ್ವಜನಿಕಗೊಂಡ ಬಳಿಕ ಪ್ರತಿದಿನ ಸುದ್ದಿಯಲ್ಲಿದ್ದರು ಮತ್ತು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದರು.
ಅವರನ್ನು ಬಂಧಿಸುವಂತೆ ನಿನ್ನೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷರ ಕಚೇರಿಯಲ್ಲಿ ದೇವರಾಜೇಗೌಡರ ವಿಚಾರಣೆ ನಡೆಸಲಾಗಿದೆ.
ಏ.1ರಂದು ಎಫ್ಐಆರ್:
ಈ ನಡುವೆ ದೇವರಾಜೇಗೌಡ ಬಂಧನ ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 1ರಂದೇ ಎಫ್ಐಆರ್ ದಾಖಲಾಗಿತ್ತು. ಹಾಗಾದರೆ ಇಷ್ಟು ದಿನ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದುರಾಗಿದೆ.
ಸಂತ್ರಸ್ತೆಯು ಏಪ್ರಿಲ್ 1ರಂದು ರಾತ್ರಿ 9.30ಕ್ಕೆ ಠಾಣೆಗೆ ಹಾಜರಾಗಿ ದೂರು ನೀಡಿ ಸಂತ್ರಸ್ತೆಯು ಹಾಸನದ ತಣ್ಣೀರುಹಳ್ಳಿ, ನಿಲವಾಗಿಲು ರಸ್ತೆಯಲ್ಲಿರುವ ನಿವೇಶನ ಮಾರಾಟ ಮಾಡುವ ವಿಚಾರವಾಗಿ ಆರೋಪಿ ಹೊಳೆನರಸೀಪುರದ ಕಾಮಸಮುದ್ರ ಗ್ರಾಮದ ದೇವರಾಜೇಗೌಡರ ಜೊತೆ 10 ತಿಂಗಳ ಹಿಂದೆ ಪರಿಚಯವಾಗಿ ಅಗಾಗ ಪೋನ್ ಮಾಡುತ್ತಾ ಬಂದಿದ್ದಾರೆ.
ಮನೆ ನಿರ್ಮಾಣದ ಭರವಸೆ:
ಸಂತ್ರಸ್ತೆಯ ಪತಿ ಹೊಳೇನರಸೀಪುರದಲ್ಲಿ ನಿವೇಶನ ಹೊಂದಿದ್ದಾರೆ. ಈ ನಿವೇಶನದಲ್ಲಿ ನಾನೇ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಂತ್ರಸ್ತೆಗೆ ಹೇಳಿದ್ದ ದೇವರಾಜೇಗೌಡರು, ಎಸಿ ಸಾಹೇಬರು ನನಗೆ ಪರಿಚಯವಿರುತ್ತಾರೆ. ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ. ನೀವು ಒಬ್ಬರೇ ಹಾಸನಕ್ಕೆ ಬನ್ನಿ ಎಂದು ಕರೆಸಿಕೊಂಡು ಇನೋವಾ ಕಾರಿನಲ್ಲಿ, ನಾಲೈದು ಕಡೆ ಸುತ್ತಾಡಿಸಿ ನಂತರ ಹಾಸನ, ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕ ಘಟಕದ ಹಿಂದಿರುವ ಜನನಿಬಿಡ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೈಕೈಗೆ ಮುಟ್ಟಿ ದೈಹಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.