ಬೆಂಗಳೂರು,ಜು.11:
ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳಿಗೆ ಸಿದ್ದರಾಮಯ್ಯ ತೆರೆ ಎಳೆದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಬದಲಾವಣೆಗೆ
ವೇದಿಕೆ ಸಜ್ಜುಗೊಳ್ಳತೊಡಗಿದೆ.
ಸುರ್ಜೇವಾಲ ಅವರ ಕಾರ್ಯವೈಖರಿಯ ಬಗ್ಗೆ ಮೊದಲಿನಿಂದಲೂ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತಮ್ಮ ಆಪ್ತ ಬಣದ ಮೂಲಕ ಸುರ್ಜೇವಾಲಾ ಹಠಾವೋ ತಂತ್ರ ರೂಪಿಸತೊಡಗಿದ್ದಾರೆ.
ಸದ್ಯ ಉಂಟಾಗಿದ್ದ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗೆ ಸುರ್ಜೇವಾಲ ಅವರೇ ಕಾರಣ, ಅನುದಾನ ಹಂಚಿಕೆ ಮತ್ತು ಕೆಲವು ಮಂತ್ರಿಗಳ ಬಗ್ಗೆ ಶಾಸಕರು ಹೊಂದಿರುವ ಅಪಸ್ವರವನ್ನೇ ಪ್ರಮುಖವಾಗಿಟ್ಟುಕೊಂಡು ಬೆಂಗಳೂರಿಗೆ ಆಗಮಿಸಿದ ಅವರು ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರ ಜೊತೆಗೆ ವೈಯಕ್ತಿಕವಾಗಿ ಮಾತನಾಡುವ ಮೂಲಕ ಗೊಂದಲ ಮೂಡಿಸಿದ್ದಾರೆ.
ಸರ್ಕಾರದ ಕಾರ್ಯವೈಖರಿ ಮಂತ್ರಿಗಳ ಕುರಿತಾಗಿ ಶಾಸಕರ ಅಭಿಪ್ರಾಯ ಕೇಳಿದ ಅವರು ಇದರ ಜೊತೆಯಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕಾ ಮುಖ್ಯಮಂತ್ರಿ ಬದಲಾಯಿಸಿದರೆ ನಿಮ್ಮ ನಿಲುವು ಏನಾಗಲಿದೆ ಎಂಬ ಪ್ರಶ್ನೆ ಕೇಳುವ ಮೂಲಕ ಅನಗತ್ಯ ಗೊಂದಲ ಮೂಡಿಸಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತ ಬಣ ಆಪಾದಿಸಿದೆ.
ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ವಿಚಾರವಾಗಿ ಗೊಂದಲ ಉಂಟಾಗಲು ಇವರ ವರ್ತನೆಯ ಕಾರಣವಾಗಿದೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹಲವಾರು ಕಾರಣಗಳ ಮೂಲಕ ಇವರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಹೀಗಾಗಿ ಇವರನ್ನು ಬದಲಾಯಿಸಿ ಸರ್ಕಾರ ಮತ್ತು ಪಕ್ಷದ ನಡುವೆ ಉತ್ತಮ ಸಮನ್ವಯ ಸಾಧಿಸುವ ಮೂಲಕ ಪಕ್ಷ ಸಂಘಟನೆಗೆ ಶ್ರಮಿಸುವ ವ್ಯಕ್ತಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.
ಸಮಾಧಾನ ತಂದಿಲ್ಲ:
ಈ ನಡುವೆ ಸುರ್ಜೆವಾಲಾ ಅವರ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಅವರು ನಡೆದುಕೊಳ್ಳುತ್ತಿರುವ ರೀತಿ ತಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರು ಅಸಮಾಧಾನ ಹೊಂದಿದ್ದಾರೆ ಎಂಬ ನೆಪದಲ್ಲಿ ಸುರ್ಜೇವಾಲ ರಾಜ್ಯಕ್ಕೆ ಭೇಟಿನೀಡಿ ಅಭಿಪ್ರಾಯ ಸಂಗ್ರಹಿಸಿರುವುದು ತರವಲ್ಲ.ಅವರು ಬಂದು ನಡೆಸಿದ ಪ್ರಕ್ರಿಯೆ ಬಗ್ಗೆ ನನಗೆ ಸಮಾಧಾನವಿಲ್ಲ’ ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಯಂತಿ ನಟರಾಜನ್ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದರು. ಅವರು ಅಲ್ಲಿ ಒಂದೇ ದಿನಕ್ಕೆ ವಾಪಸ್ ಹೋಗಿದ್ದಾರೆ. ಆದರೆ ರಾಜ್ಯದಲ್ಲಿ ಏನಾಗಿದೆ ನೋಡಿ’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಕ್ಷದ ಹೈಕಮಾಂಡ್, ಇಲ್ಲವೆ ಶಾಸಕರು ಬದಲಾವಣೆ ಮಾಡಬೇಕು. ಶಾಸಕರು ಬದಲಾಯಿಸಲು ತಯಾರಿಲ್ಲ. ಹೈಕಮಾಂಡ್ ಸಹ ಬದಲಾವಣೆ ಮಾಡುವುದಿಲ್ಲ ಅಂದುಕೊಂಡಿದ್ದೇನೆ’ ಎಂದರು
ದೇಶದಲ್ಲಿ ಹಿಂದುಳಿದ ವರ್ಗಗಳನ್ನು ಸಂಘಟಿಸುವ ದೃಷ್ಟಿಯಿಂದ ಎಐಸಿಸಿ ರಚಿಸಿರುವ ಒಬಿಸಿ ಸಲಹಾ ಮಂಡಳಿ ನಾಯಕತ್ವವನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುವುದು ಅನುಮಾನ. ಅವರಿಗೆ ಹಿಂದಿ ಬರುವುದಿಲ್ಲ. ರಾಷ್ಟ್ರ ಮಟ್ಟಕ್ಕೆ ಹೋಗಿ ಏನು ಮಾಡುತ್ತಾರೆ. ದೆಹಲಿಯಲ್ಲಿ ಹಿಂದಿ ಬರದಿದ್ದರೆ ಏನೂ ನಡೆಯುವುದಿಲ್ಲ ಎಂದು ತಿಳಿಸಿದರು.