ಕಲಬುರಗಿ, ಜ. 24,
ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು ಪರಿಸರ ಸ್ನೇಹಿ ಯೋಜನೆಗಳನ್ನ ಜಾರಿಗೆ ತರಲಾಗುತ್ತಿದೆ ಎಂದು ಇಂಧನ ಮಂತ್ರಿ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ರಾಜ್ಯಾದ್ಯಂತ ಕುಸುಮ್- ಸಿ ಯೋಜನೆಯಡಿ ಎರಡು ಹಂತಗಳಲ್ಲಿ 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು
ಒಂದು ಮೆಗಾ ವ್ಯಾಟ್ ಘಟಕಕ್ಕೆ 4 ಎಕರೆ ಜಮೀನು ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರಿ ಜಮೀನು ಉಚಿತವಾಗಿ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಲೀಸ್ ಪಡೆದು ಯೋಜನೆ ಆರಂಭಿಸಲಾಗುತ್ತಿದೆ ಎಂದರು.
ಕರ್ನಾಟಕವು ಈ ಹಿಂದೆ ಸಾಕಷ್ಟು ವಿದ್ಯುತ್ ಸಮಸ್ಯೆ ಎದುರಿಸುತ್ತಿತ್ತು. ಕಳೆದ ಬಾರಿ ಬೇಸಿಗೆಯಲ್ಲೂ ತೀವ್ರವಿದ್ಯುತ್ ಅಭಾವ ಸೃಷ್ಟಿಯಾಗಿತ್ತು. ಆ ವೇಳೆ ಪಂಜಾಬ್ ಮತ್ತು ಉತ್ತರಪ್ರದೇಶ ರಾಜ್ಯದಿಂದ ವಿನಿಮಯ ಆಧಾರದಲ್ಲಿ ವಿದ್ಯುತ್ ಪಡೆದು ರೈತರು ಸೇರಿದಂತೆ ರಾಜ್ಯದ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗಿದೆ. ಈ ಬಾರಿ ಳೆ ಉತ್ತಮವಾಗಿ ಬಂದು ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶದಲ್ಲಿ ಕೆಟ್ಟಿರುವ ಟ್ರಾನ್ಸ್ ಫಾರ್ಮರ್ ಗಳ ದುರಸ್ತಿ, ಅಥವಾ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿ, ಕಂಬಗಳ ದುರಸ್ತಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಬಗೆಹರಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಜನ ಪ್ರತಿನಿಧಿಗಳ ಗಮನಕ್ಕೆ ತಂದು ಅವರ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿರುವುದಾಗಿ ವಿವರಿಸಿದರು.
Previous Articleಬಿಜೆಪಿಯಲ್ಲಿ ತೀವ್ರಗೊಂಡ ಬಣ ಬಡಿದಾಟ
Next Article ಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ