ಕಳೆದ 25 ದಿನಗಳಿಂದ ನಗರದ ಜನತೆಯ ನಿದ್ದೆಗೆಡಿಸುತ್ತಿರುವ ಚಾಲಾಕಿ ಚಿರತೆಯನ್ನು ಸೆರೆ ಹಿಡಿಯಲು ಹಲವು ರೀತಿಯ ಸರ್ಕಸ್ ಮಾಡಿದರೂ ಸಾಧ್ಯವಾಗುತ್ತಿಲ್ಲ.
ಹನಿಟ್ರ್ಯಾಪ್, ಆನೆಗಳ ಖೆಡ್ಡಾ,ಹಂದಿಬಲೆಗೂ ಸಿಗದ
ಚಾಲಾಕಿ ಚಿರತೆ ಕಣ್ಣಾಮುಚ್ಚಾಲೇ ಆಟವಾಡುತ್ತಿದೆ.
ಚಿರತೆ ಭೀತಿಯಿಂದ ಕಳೆದ 20ಕ್ಕೂ ದಿನಗಳಿಂದ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ.
ಇತ್ತ ಚಿರತೆ ಸಿಗುತ್ತಿಲ್ಲ, ಅತ್ತ ಮಕ್ಕಳಿಗೆ ಪಾಠ ಆಗುತ್ತಿಲ್ಲ ಎನ್ನುವ ಸ್ಥಿತಿ ಬೆಳಗಾವಿ ಮಂದಿಯದ್ದಾಗಿದೆ, ಜತೆಗೆ ಆಗಾಗ್ಗೆ ಕಾಣಿಸಿಕೊಳ್ಳುವ ಚಿರತೆಯಿಂದಾಗಿ ಓಡಾಡುವುದೂ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇದಾಗಲೇ ಅರಣ್ಯ ಇಲಾಖೆ ಸಾಧ್ಯವಾದಷ್ಟು ರೀತಿಯ ಯೋಜನೆ ರೂಪಿಸಿದರೂ ಅದು ಫಲಪ್ರದವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಚಾಲಾಕಿ ಚಿರತೆ ಶೋಧಕ್ಕಾಗಿ ಅರಣ್ಯ ಇಲಾಖೆ ಯೋಜನೆ ಬದಲಾವಣೆ ಮಾಡಿದೆ. ಎರಡು ದಿನ ಕೇವಲ ಆಪರೇಷನ್ ಗಜಪಡೆ ನಡೆಸಲು ನಿರ್ಧಾರ ಮಾಡಿದೆ.
ಚಿರತೆಗೆ ಡಿಸ್ಟರ್ಬ್ ಮಾಡದೇ ಸೆರೆಹಿಡಿಯಲು ಯೋಜನೆ ರೂಪಿಸಲಾಗಿದೆ.
ಇಷ್ಟು ದಿನ ಅಳವಡಿಸಿದ್ದ ಸ್ಥಳ ಬಿಟ್ಟು ಬೋನು, ಟ್ರ್ಯಾಪ್ ಕ್ಯಾಮೆರಾ ಬೇರೆ ಸ್ಥಳದಲ್ಲಿ ಅಳವಡಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ. 8 ಸಾಮಾನ್ಯ ಬೋನು,1 ದೊಡ್ಡದಾದ ಬೋನು, 23 ಟ್ರ್ಯಾಪ್ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ.
ಕೋಂಬಿಂಗ್ ವೇಳೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಆ ಜಾಗದಸುತ್ತಮುತ್ತ ಟ್ರ್ಯಾಪ್ ಕ್ಯಾಮೆರಾ, ಬೋನುಗಳ ಅಳವಡಿಕೆ ಮಾಡುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.
ಟ್ರ್ಯಾಪ್ ಕ್ಯಾಮೆರಾ ಬೋನುಗಳನ್ನು ಶಿಫ್ಟ್ ಮಾಡುತ್ತೇವೆ. ಆದಷ್ಟು ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ. ನಿನ್ನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಹೇಳಿದ್ದಾರೆ.
250 ಎಕರೆ ಪ್ರದೇಶದಲ್ಲಿಯೇ ಚಿರತೆ ಇರುವ ಶಂಕೆ ವ್ಯಕ್ತವಾಗಿದೆ. ಈ ನಡುವೆಯೇ ಶಾಲೆ ಇನ್ನೂ ಆರಂಭ ಮಾಡಲಿಲ್ಲ. ಗಾಲ್ಫ್ ಮೈದಾನ ಸುತ್ತ ಬಿಗಿ ಭದ್ರತೆ ಒದಗಿಸಿ ಶಾಲೆ ಆರಂಭಿಸುವ ವಿಚಾರದ ಕುರಿತು ಜಿಲ್ಲಾಧಿಕಾರಿಗಳು ತಗೆದುಕೊಳ್ಳಬೇಕು ಎಂದು ಡಿಎಫ್ಒ ಆ್ಯಂಥೋನಿ ಮರಿಯಪ್ಪ ಹೇಳಿಕೆ ನೀಡಿದ್ದಾರೆ.
ಮೂತ್ರ ಸಿಂಪಡಣೆ:
ಇಂದು ಎಂಬತ್ತು ಜನ ಸಿಬ್ಬಂದಿ, ಜೆಸಿಬಿ, ಆನೆಗಳಿಂದ ಚಿರತೆ ಸೆರೆಗೆ ಪ್ಲ್ಯಾನ್ ಮಾಡಲಾಗಿದೆ. ಪ್ರತಿದಿನ 250 ಎಕರೆ ಪ್ರದೇಶದಲ್ಲಿರುವ ಗಾಲ್ಫ್ ಮೈದಾನವನ್ನು ಸಿಬ್ಬಂದಿ ಶೋಧ ಮಾಡುತ್ತಿದ್ದಾರೆ. ಚಿರತೆ ಸೆರೆಯಾಗದ ಹಿನ್ನೆಲೆ ಎರಡು ದಿನಗಳಿಂದ ಹನಿಟ್ರ್ಯಾಪ್ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಚಿರತೆ ಸೆರೆಗೆ ಇಟ್ಟಿರುವ ಬೋನ್ ನಲ್ಲಿ ಹೆಣ್ಣು ಚಿರತೆ ಮೂತ್ರ ಸಿಂಪಡಣೆ ಮಾಡಲಾಗಿದೆ.
ಈ ಮೂಲಕ ಚಿರತೆಯನ್ನ ಲೈಂಗಿಕವಾಗಿ ಆಕರ್ಷಣೆ ಮಾಡಿ ಖೆಡ್ಡಾಗಿ ಬೀಳಿಸುವ ಪ್ಲ್ಯಾನ್ ಮಾಡಲಾಗಿದೆ. ಆದರು ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ.
ಸೆರೆಯಾಗದ ಚಿರತೆಯಿಂದಾಗಿ ನಗರದ ಜನರಲ್ಲಿ ಆತಂಕ ದೂರವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ.
ಹನಿಟ್ರ್ಯಾಪ್, ಆನೆಗಳ ಖೆಡ್ಡಾಕ್ಕೂ ಬೀಳದ ಚಾಲಾಕಿ ಚಿರತೆ
Previous Articleಮುಳುಗುತ್ತಿದ್ದ ಬಸ್ ನಿಂದ ಪ್ರಯಾಣಿಕರು ಪಾರು
Next Article ಇಂದೂ ಬರಲಿಲ್ಲ ಹಿಜಾಬ್ ತೀರ್ಪು..