ಬೆಂಗಳೂರು, ಮೇ.14- ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ
ಬಿಡದಿಯ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು 8 ಮಂದಿಗೆ ಬಾಳಿಗೆ ಬೆಳಕಾಗಿದ್ದಾರೆ.
ಬಿಡದಿಯ ಚಂದ್ರಶೇಖರ್ ಅವರಿಗೆ ಅಪಘಾತವಾಗಿತ್ತು. ತಲೆಯ ಹಿಂಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸತತ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಂದ್ರಶೇಖರ್ ಚಿಕಿತ್ಸೆಗೆ ಸ್ಪಂದಿಸದಿದ್ದಾಗ, ವೈದ್ಯರು ಮೆದುಳು ನಿಷ್ಕ್ರೀಯ (ಬ್ರೈನ್ ಡೆಡ್) ಎಂದು ಘೋಷಿಸಿದ್ದರು. ಚಂದ್ರಶೇಖರ್ ಬದುಕಿ ಬರಲ್ಲ ಎಂಬ ಕಹಿ ಸತ್ಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೋವಿನಲ್ಲೂ ಮಾನವೀಯತೆ ಮರೆದ ಕುಟುಂಬ, ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿತು.
ಹೃದಯ, ಎರಡು ಕಣ್ಣು, ಕಿಡ್ನಿ, ಯಕೃತ್ ಅನ್ನು ದಾನವಾಗಿ ನೀಡಿದ್ದಾರೆ. ಆ ಮೂಲಕ 8 ಮಂದಿಯ ಬದುಕಿಗೆ ಬೆಳಕಾಗಿದ್ದಾರೆ. ಮೃತ ಚಂದ್ರಶೇಖರ್ ಖಾಸಗಿ ಕಂಪನಿಯಲ್ಲಿ ಫೀಲ್ಡ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ಚಂದ್ರಶೇಖರ್ ಅಂತ್ಯಕ್ರಿಯೆ ಬಿಡದಿಯಲ್ಲಿ ನೆರವೇರಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರಶೇಖರ್ಗೆ ನೂರಾರು ಮಂದಿ ಕಣ್ಣೀರ ವಿದಾಯ ಹೇಳಿದರು.