ನವದೆಹಲಿ:
ಹೋಳಿ ಹಬ್ಬದ ನಂತರ ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ.ಈ ಬಾರಿ ದಕ್ಷಿಣ ಭಾರತದವರಿಗೆ ಈ ಹುದ್ದೆ ಸಿಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಮಂತ್ರಿ ಜೆ.ಪಿ.ನಡ್ಡಾ ಆವರು ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ತತ್ವದ ಅನ್ವಯ ಅವರು ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವುದಾಗಿ ತಿಳಿಸಿದ್ದು ಮುಂದಿನ ವ್ಯವಸ್ಥೆ ಆಗುವವರೆಗೆ ಆ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಇದೀಗ ಇವರ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆದಿದ್ದು ದಕ್ಷಿಣ ಭಾರತದವರಿಗೆ ಮಣೆ ಹಾಕಲು ಹೈಕಮಾಂಡ್ ತೀರ್ಮಾನಿಸಿದೆ ಈ ಮೂಲಕ ದಕ್ಷಿಣ ಭಾರತದಲ್ಲಿ ಸಂಘಟನೆಯ ಬಲ ಹೆಚ್ಚಿಸಿಕೊಳ್ಳುವ ಜೊತೆಗೆ ಮುಂಬರುವ ತಮಿಳುನಾಡು ಕೇರಳ ಮತ್ತು ಪಾಂಡಿಚರಿ ವಿಧಾನಸಭೆ ಚುನಾವಣೆಗಳ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ.
ಸಂಘ ಪರಿವಾರದ ನಾಯಕರು ಈ ಹುದ್ದೆಗೆ ಮಹಾರಾಷ್ಟ್ರದ ಭೂಪೇಂದ್ರ ಯಾದವ್ ಅವರನ್ನು ನೇಮಕ ಮಾಡಲು ಒಲವು ಹೊಂದಿದ್ದಾರೆ ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೇಂದ್ರದ ಮಾಜಿ ಮಂತ್ರಿಗಳಾದ ಕಿಶನ್ ರೆಡ್ಡಿ ಅಥವಾ ಪುರಂದರೇಶ್ವರಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒಲವು ಹೊಂದಿದ್ದಾರೆ ಎಂದು ಗೊತ್ತಾಗಿದೆ
ಮಾರ್ಚ್ 21ರಿಂದ 23ರವರೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿನಿಧಿ ಸಮಾವೇಶ ಹಾಗೂ ಇತರೆ ಸಂಘಟನೆಗಳ ಸಮನ್ವಯ ಸಭೆ ನಡೆಯಲಿದೆ ಈ ಸಭೆಗೂ ಮೊದಲು ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಶೇ. 50ರಷ್ಟು ರಾಜ್ಯಗಳಲ್ಲಿ ಸಂಘಟನಾ ಚುನಾವಣೆಗಳು ಮುಗಿಯಬೇಕು ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿರುವ ಹೈಕಮಾಂಡ್ ಆಯ್ದ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾರ್ಚ್ 14ರೊಳಗೆ ಚುನಾವಣೆಗಳನ್ನು ನಡೆಸಲು ತೀರ್ಮಾನಿಸಿದೆ
ಇದಾದ ನಂತರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದ ಮೇಲೆ ಹೆಚ್ಚಿನ ಗಮನವಿದ್ದು, ಮುಂದಿನ ಬಿಜೆಪಿ ಅಧ್ಯಕ್ಷರು ದಕ್ಷಿಣ ಭಾರತದಿಂದ ಆಯ್ಕೆಯಾಗುವ ಸಾಧ್ಯತೆಯಿದೆ.
ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷರೂ ಆಗಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಹೆಸರು ಬಿಜೆಪಿ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಕೇಳಿಬರುತ್ತಿದೆ.
ದಕ್ಷಿಣದಿಂದ ಕೇಳಿಬರುತ್ತಿರುವ ಮತ್ತೊಂದು ಹೆಸರು ಕೂಡ ಆಂಧ್ರಪ್ರದೇಶದ್ದೇ. ಆಂಧ್ರದ ದಗ್ಗುಬಾಟಿ ಪುರಂದೇಶ್ವರಿ ಪ್ರಸ್ತುತ ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷೆ. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಕೊಯಮತ್ತೂರಿನ ಶಾಸಕಿ ವನತಿ ಶ್ರೀನಿವಾಸನ್ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.