ಬೆಂಗಳೂರು,ಡಿ.20:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ವಿಧಾನ ಪರಿಷತ್ ನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಸಿ.ಟಿ.ರವಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರು ಸಿ.ಟಿ.ರವಿ ಎಲ್ಲಿದ್ದಾರೋ ಅಲ್ಲಿಂದ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದರು.
ಮತ್ತೊಂದೆಡೆ ತಮ್ಮ ಬಂಧನ ಕ್ರಮ ಪ್ರಶ್ನಿಸಿ ಸಿ.ಟಿ.ರವಿ ಜನ ಪ್ರತಿನಿಧಿಗಳ ಕೋರ್ಟ್ ನಲ್ಲೂ ಅರ್ಜಿ ಸಲ್ಲಿಸಿದ್ದು,ಅಲ್ಲಿಯೂ ವಿಚಾರಣೆ ನಡೆಯಿತು.
ಸಿ.ಟಿ.ರವಿ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ”ಬಂಧನದ ಕಾರಣದ ಕುರಿತು ಕಕ್ಷಿದಾರರಿಗೆ, ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ದೂರುದಾರರು ಓರ್ವ ಮಂತ್ರಿಯಾಗಿದ್ದಾರೆ, ಅವರಿಗೆ ಬೆದರಿಕೆ ಹಾಕಲು ಸಾಧ್ಯವೇ? ಎಂದು ನ್ಯಾಯಾಲಯದ ಗಮನ ಸೆಳೆದ ಅವರು ದೂರುದಾರರ ಬೆಂಬಲಿಗರೇ ತಮ್ಮ ಕಕ್ಷಿದಾರರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ” ಎಂದು ಹೇಳಿದರು.
ಕಕ್ಷಿದಾರರು ಆರೋಪಿ ಪ್ರಕರಣದ ಸಾಕ್ಷಿನಾಶ ಮಾಡಬಹುದೆಂದು ಹೇಳಿದ್ದಾರೆ. ಆದರೆ ಸಾಕ್ಷಿಗಳೆಲ್ಲಾ ಆಡಳಿತ ಪಕ್ಷದವರೇ ಆಗಿರುವಾಗ ಸಾಕ್ಷಿ ನಾಶ ಹೇಗೆ ಸಾಧ್ಯ? ಸದನದ ವಸ್ತುಗಳನ್ನು ಹಾನಿ ಮಾಡಿದರೆ ಅದನ್ನು ಪ್ರಶ್ನಿಸಬಹುದೇ ವಿನಹ ಸದನದ ಮಾತುಗಳಿಗೆ ಪ್ರಕರಣ ದಾಖಲಿಸುವ ಅವಕಾಶ ನೀಡಿದರೆ ಸದಸ್ಯರು ಸ್ವತಂತ್ರವಾಗಿ ಮಾತನಾಡ ಅವಕಾಶ ಕಳೆದುಕೊಳ್ಳುತ್ತಾರೆ. ಒಬ್ಬರಿಗೊಬ್ಬರ ವಿರುದ್ಧ ಪ್ರಕರಣ ದಾಖಲು ಮಾಡುತ್ತಾ ಹೋಗುತ್ತಾರೆ. ಆದ್ದರಿಂದ ಪ್ರಕರಣದಲ್ಲಿ ಸಿ.ಟಿ.ರವಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಸ್.ಶ್ಯಾಮ್ ಸುಂದರ್, ”ಆರೋಪಿ ಅಸಾಂವಿಧಾನಿಕ ಪದ ಬಳಕೆ ಮಾಡಿ ಸುಮಾರು ಬಾರಿ ದೂರುದಾರರನ್ನು ಕರೆದಿದ್ದಾರೆ. ಓರ್ವ ಶಾಸಕ ಮಹಿಳೆಯನ್ನು ಹಾಗೆ ಕರೆದಿದ್ದಾರೆ” ಇದೊಂದು ಅಕ್ಷಮ್ಯ ಎಂದು ಸೀತಾ ಸೊರೇನ್ ಪ್ರಕರಣ ಉಲ್ಲೇಖಿಸಿ ವಾದ ಮಂಡಿಸಿದರು.
ಅಲ್ಲದೇ ಆರೋಪಿ ಅತ್ಯಂತ ಪ್ರಭಾವಿಯಾಗಿದ್ದು ಇವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು
ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.
ಜಾಮೀನು ಕುರಿತ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ನಾಳೆಗೆ ಮುಂದೂಡಿದ ಬೆನ್ನಲ್ಲೇ ಹೈಕೋರ್ಟಿಗೆ ಜಾಮೀನು ಕೋರಿ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿ ಎಂಜಿ ಉಮಾ ಅವರ ಮುಂದೆ ವಾದ ಮಂಡಿಸಿದ ಸಿಟಿ ರವಿ ಪರ ವಕೀಲ ಸಂದೇಶ್ ಚೌಟ ,ಆರೋಪಿ, ಫಿರ್ಯಾದಿ ಇಬ್ಬರೂ ಶಾಸಕರು.
ತಮ್ಮ ಕಕ್ಷಿದಾರರ ವಿರುದ್ಧದ ಆರೋಪಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ. ಈ ಪ್ರಕರಣದಲ್ಲಿ ಪೊಲೀಸರು ಬಂಧನಕ್ಕೆ ಮುನ್ನ 41 ಎ ಅಡಿ ನೋಟಿಸ್ ನೀಡಬೇಕಿತ್ತು. ಪೊಲೀಸರು ಬಂಧನಕ್ಕೆ ಕಾರಣಗಳನ್ನು ನೀಡಬೇಕಿತ್ತು. ಆದರೆ ಇದನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿಲ್ಲ. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಕೋರ್ಟ್ ಗಮನ ಸೆಳೆದರು.
ಸಿಟಿ ರವಿಯನ್ನು ಬಂಧಿಸಲು ಹಲ್ಲೆ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು. ವಿಧಾನಪರಿಷತ್ ಪ್ರತಿಪಕ್ಷದ ಶಾಸಕರಾಗಿದ್ದಾರೆ. ಹೀಗಾಗಿ ಪರಾರಿಯಾಗುವ ಸಾಧ್ಯತೆ ಇಲ್ಲ. ಹೀಗಿದ್ದೂ ಅವರು ಮೇಲೆ ಹಲ್ಲೆ ನಡೆದಿದೆ. ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಿರುವುದಾಗಿ ವರದಿಯಿದೆ. ಇನ್ನು ಸದನದಲ್ಲಿ ನಡೆದ ಘಟನೆ ಕುರಿತು ಏನನ್ನೂ ರೆಕಾರ್ಡ್ ಮಾಡಿಲ್ಲವೆಂದು ಸಭಾಪತಿ ಹೇಳಿಕೆ ನೀಡಿದ್ದಾರೆ ಹೀಗಾಗಿ ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿದರು.
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್,ವಿಧಾನ ಪರಿಷತ್ ನಲ್ಲಿ ಈ ರೀತಿಯಾಗಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿ,
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತು.
ಸಿಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಇತ್ತ ಚಿಕ್ಕಮಗಳೂರಿನ ಅವರ ನಿವಾಸದ ಬಳಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಸಿ.ಟಿ.ರವಿ ಮನೆ ಮುಂದೆ ಸಂಭ್ರಮಿಸಿದರು.
ಸಂತಸ:
ಜಾಮೀನು ಸಿಕ್ಕ ನಂತರ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ಹೈಕೋರ್ಟ್ ಆದೇಶದಿಂದ ಸತ್ಯಕ್ಕೆ ಜಯ ಸಿಕ್ಕಿದೆ. ರಾಜಕೀಯ, ಸೈದ್ಧಾಂತಿಕವಾಗಿ ಟೀಕೆ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಎಂದೂ ಟೀಕೆ ಮಾಡಲ್ಲ. ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳದುಕೊಳ್ಳಿ. ಡಿ.ಕೆ.ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೇಳಿ ತಿಳಿದುಕೊಳ್ಳಿ. ನಾನು ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ. ನನ್ನ ಮೇಲೆ ಸಾಕ್ಷಿ ಇಲ್ಲದಿದ್ದರೂ ಎಫ್ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು
Previous Articleಪರಿಷತ್ತಿನಲ್ಲಿ ಧೃತರಾಷ್ಟ್ರರು..?
Next Article ವಿರಾಟ್ ಒಬ್ಬ ಬುಲೀ (Bully) ಎಂದು ಕರೆದ ಆಸ್ಸಿ ಮೀಡಿಯಾ