ಬೆಂಗಳೂರು.ಸೆ,6- ಕಳೆದೊಂದು ವಾದದಿಂದ ಸುರಿಯುತ್ತಿರುವ ಭಾರಿ ಮಳೆಗೆ ಉದ್ಯಾನ ನಗರಿ ಬೆಂಗಳೂರು ಅದ್ವಾನ ನಗರಿಯಾಗಿ ಪರಿಣಮಿಸಿದೆ.ನಗರದ ಯಾವುದೇ ಭಾಗಕ್ಕೋದರೂ ಒಂದಲ್ಲ ಒಂದು ಸಮಸ್ಯೆ ಕಾಣ ಸಿಗುತ್ತಿದೆ.
ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ ಪೂರ್ವ ಮತ್ತು ದಕ್ಷಿಣ ಬೆಂಗಳೂರಂತೂ ಸಮಸ್ಯೆಯ ಆಗರವಾಗಿದೆ. ಪರಿಸ್ಥಿತಿ ನಿಭಾಯಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ಇದರ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರ ನಡೆಯಂತೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಸಾಮಾಜಿಕ ಜಾಲ ತಾಣದಲ್ಲಿ ಅವರು ಮಾಡಿರುವ ಪೋಸ್ಟ್ ಆಗಿದ್ದು ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಅಂದ ಹಾಗೆ ಅವರು ಜಾಲತಾಣದಲ್ಲಿ ಪೋಸ್ಟ ಮಾಡಿರುವ ವಿಡಿಯೊದಲ್ಲಿ ‘ಪದ್ಮನಾಭ ನಗರದ ಸಾತ್ವಿ ಕಿಚನ್‌ಗೆ ಬಂದಿದ್ದೆ. ಇನ್‌ಸ್ಟಾಗ್ರಾಂನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್ ಆಗಿ ಇಲ್ಲಿಗೆ ಬಂದಿದ್ದು. ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ. ನೀವೂ ಬನ್ನಿ. ತಿಂದಾಗ್ಲೇನೆ ಆಸ್ವಾದನೆ ನಿಮಗೆ ಗೊತ್ತಾಗುವುದು. ಉಪ್ಪಿಟ್ಟು ಬಹಳ ಚೆನ್ನಾಗಿದೆ. ಬನ್ನಿ’ ಎಂದು ಜನರನ್ನು ಆಹ್ವಾನಿಸುತ್ತಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ರೋಮ್ ಹೊತ್ತಿ ಉರಿಯುತ್ತಿದ್ದಾಗ ಎನ್ನುವುದು ಹಳೆಯ ಮಾತು. ಬೆಂಗಳೂರಲ್ಲಿ ಪ್ರವಾಹವಾದಾಗ ನಮ್ಮ ದಕ್ಷಿಣದ ಸಂಸದ ಸಂಭ್ರಮ ಪಡುತ್ತಿದ್ದರು ಎಂಬುದು ಈಗಿನ ಮಾತಾಗಿದೆ. ಎಂದು ಟೀಕಿಸಿದ್ದಾರೆ.
ಮಳೆಯಿಂದ ಬೆಂಗಳೂರಿನ ಜನರು ಸಂಕಷ್ಟ ಪಡುತ್ತಿದ್ದಾಗ ಈ ಬೇಜವಾಬ್ದಾರಿ ಸಂಸದ ಹೋಟೆಲ್ ಒಂದನ್ನು ಪ್ರಚಾರ ಮಾಡುತ್ತಾ, ದೋಸೆಯ ರುಚಿಯನ್ನು ಸವಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.