ಬೆಂಗಳೂರು,ಅ.19-
ನೆಹರು, ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಚುನಾವಣೆ ನಡೆದಿದ್ದು ರಾಜ್ಯದ ಮುತ್ಸದ್ಧಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ರಾಜ್ಯದ ಎರಡನೆ ಹಾಗೂ ದೇಶದ ಎರಡನೇ ದಲಿತ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ರಾಜ್ಯದ ದಿವಂಗತ ಎಸ್. ನಿಜಲಿಂಗಪ್ಪ ಮತ್ತು ದಲಿತ ನಾಯಕ ದಿವಂಗತ ಬಾಬು ಜಗಜೀವನ್ ರಾಮ್ ಈ ಹುದ್ದೆ ಅಲಂಕರಿಸಿದ್ದರು
ಎಐಸಿಸಿ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಿದ್ದರು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ನಿರೀಕ್ಷೆಯಂತೆ ಮಲ್ಲಿಕಾರ್ಜುನ ಖರ್ಗೆ ಆರಂಭಿಕ ಹಂತದಲ್ಲೇ 7897 ಮತಗಳನ್ನು ಪಡೆದಿದ್ದರು. ಇದರಲ್ಲಿ ಶಶಿತರೂರ್ 1072 ಮತಗಳನ್ನು ಪಡೆದರು. 416 ಮತಗಳನ್ನು ಅಸಿಂಧುಗೊಳಿಸಲಾಯಿತು
ಈ ಮೂಲಕ ಅತಿ ಹೆಚ್ಚು ಮತಗಳಿಸಿ ಕಾಂಗ್ರೆಸ್‍ನ 18ನೇ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.
ಒಟ್ಟು ಮತದಾನದಲ್ಲಿ ಖರ್ಗೆ ಶೇ.88ರಷ್ಟು ಬೆಂಬಲ ಪಡೆದರೆ, ಶಶಿತರೂರ್ ಶೇ.12ರಷ್ಟು ಮತ ಪಡೆದಿದ್ದಾರೆ. ಖರ್ಗೆ ಸುಮಾರು 7ಸಾವಿರ ಮತಗಳ ಅಂತರದಿಂದ ಜಯ ಸಾಧಿ ಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕರ್ನಾಟಕ, ದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಮತ ಎಣಿಕೆ ಅರ್ಧದಷ್ಟು ಮುಗಿದು ಖರ್ಗೆ ಅವರು 4ಸಾವಿರಕ್ಕೂ ಹೆಚ್ಚು ಮತ ಪಡೆಯುತ್ತಿದ್ದಂತೆ ಕೈ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಖರ್ಗೆ ಆಯ್ಕೆ ಖಚಿತ ಎಂದು ಸ್ಪಷ್ಟವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೂಡ ಅಭಿನಂದನೆಗಳ ಸಂದೇಶಗಳ ಸುರಿಮಳೆಗೈದರು.
1998ರಿಂದ ಸೋನಿಯಾಗಾಂಧಿ ನಿರಂತರವಾಗಿ ಪಕ್ಷದ ಅಧ್ಯಕ್ಷರಾಗಿದ್ದು, 2017ರಿಂದ 19ರವರೆಗೆ ಎರಡು ವರ್ಷಗಳ ಕಾಲ ಮಾತ್ರ ರಾಹುಲ್‍ಗಾಂಧಿ ಪಕ್ಷದ ಜವಾಬ್ದಾರಿ ನಿಭಾಯಿಸಿದ್ದರು. ಸರಿಸುಮಾರು 24 ವರ್ಷಗಳ ಕಾಲ ಗಾಂಧಿ ಕುಟುಂಬದ ಹಿಡಿತದಲ್ಲಿದ್ದ ಪಕ್ಷ ಈ ಬಾರಿ ಗಾಂಧಿಯೇತರ ಕುಟುಂಬದ ಹಿಡಿತಕ್ಕೆ ಸಿಕ್ಕಿದೆ.
ಕಾಂಗ್ರೆಸ್ ವಂಶಪಾರಂಪರ್ಯ ರಾಜಕಾರಣ ಅನುಸರಿಸುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದವು. ಅದನ್ನು ತೊಡೆದು ಹಾಕಲು ಗಾಂಧಿ ಕುಟುಂಬ ಈ ಬಾರಿ ಚುನಾವಣೆಯಲ್ಲಿ ಸ್ರ್ಪಧಿಸದೆ ಹಿಂದೆ ಸರಿದಿತ್ತು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಧಾರದ ಬಳಿಕ ಚುನಾವಣೆ ಸ್ವರೂಪವೇ ಬದಲಾಯಿತು.
ಅಬ್ಬರ, ಆಡಂಬರವಿಲ್ಲದೆ ಪ್ರಚಾರ ನಡೆದಿತ್ತು.