ಕಳೆದೊಂದು ವಾರದಿಂದ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಚರ್ಚೆಯಲ್ಲಿರುವ ವ್ಯಕ್ತಿ ಜಗದೀಶ್ ಶೆಟ್ಟರ್. ರಾಜ್ಯ ರಾಜಕಾರಣದ ಅತ್ಯಂತ ಅದೃಷ್ಟ ಶಾಲಿ ರಾಜಕಾರಣಿ, ಎಂದೇ ಜಗದೀಶ್ ಶೆಟ್ಟರ್ ಗುರುತಿಸಲ್ಪಟ್ಟವರು.
ಮೂಲತಃ ಸಂಘ ಪರಿವಾರ ಕುಟುಂಬದ ಹಿನ್ನೆಲೆಯಿಂದ ಬಂದ ಜಗದೀಶ್ ಶೆಟ್ಟರ್ ಆರಂಭದಲ್ಲಿ ರಾಜಕೀಯವಾಗಿ ಮಹತ್ವಾಕಾಂಕ್ಷೆಯ ವ್ಯಕ್ತಿಯಾಗಿರಲಿಲ್ಲ. ಬಣಜಿಗ ಲಿಂಗಾಯತ ಸಮುದಾಯಕ್ಕೆ ಸೇರಿದ ಶೆಟ್ಟರ್, ಎಲ್.ಎಲ್.ಬಿ ಓದಿಕೊಂಡಿದ್ದಾರೆ. ತಮ್ಮ ತಂದೆಯ ಕಾಲದಿಂದಲೂ ಭಾರತೀಯ ಜನಸಂಘ– ಬಿಜೆಪಿ ಜೊತೆ ನಂಟು ಹೊಂದಿದ್ದರು. ಆ ಪಕ್ಷದ ಸಿದ್ಧಾಂತದ ನೆರಳಿನಲ್ಲಿ ಆಡಿ, ಬೆಳೆದರು.
ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಮೊದಲ ಬಾರಿಗೆ ಶಾಸನಸಭೆಗೆ ಆಯ್ಕೆಯಾಗಿ ಬಂದ ಜಗದೀಶ್ ಶೆಟ್ಟರ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಅಂದ ಹಾಗೆ ಈ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶೆಟ್ಟರ್ ಬರುವವರೆಗೂ ಅದು ಜನತಾದಳದ ಭದ್ರಕೋಟೆಯಾಗಿತ್ತು.
ಬಾಬರಿ ಮಸೀದಿ ದ್ವಂಸದ ಬೆನ್ನಲ್ಲೇ ಹುಟ್ಟಿಕೊಂಡಿತ್ತು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ.
ಮೈದಾನದಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ಧ್ವಜ ಹಾರಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಇಟ್ಟು 90ರ ದಶಕದಲ್ಲಿ ಅವಳಿ ನಗರದಲ್ಲಿ ಆರಂಭಗೊಂಡ ಹೋರಾಟ ನಂತರ ಕೋಮು ದಳ್ಳುರಿಯನ್ನೇ ಹೊತ್ತಿಸಿ ಧಗಧಗಿಸುವಂತೆ ಮಾಡಿತು. ಧ್ವಜಾರೋಹಣ ವಿಚಾರದಲ್ಲಿ ಉಂಟಾದ ಗಲಭೆ ನಿಯಂತ್ರಿಸಲು ಪೊಲೀಸರು ಮಾಡಿದ ಗೋಲಿಬಾರ್ ನಲ್ಲಿ ಮಾಡಿದ ಹಲವರು ಮಾಡಿದ ಪ್ರಕರಣ ಅವಳಿ ನಗರದಲ್ಲಿ ಕಮಲ ಅರಳುವಂತೆ ಮಾಡಿತು.
1994 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಕಸ್ಮಿಕವಾಗಿ ಜಗದೀಶ್ ಶೆಟ್ಟರ್ ಮತ್ತು ಅಶೋಕ್ ಕಾಟ್ವೇ, ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸನಸಭೆ ಪ್ರವೇಶಿಸಿದರು.
ಅಂದು ರಾಜ್ಯದಲ್ಲಿ ಜನತಾದಳ ನೇತೃತ್ವ ಸರ್ಕಾರ ರಚಿಸಿ ದೇವೇಗೌಡರು ಮುಖ್ಯಮಂತ್ರಿಯಾದರು. ಅವರ ನಾಯಕತ್ವದಲ್ಲಿ ಈದ್ಗಾ ಮೈದಾನ ವಿವಾದ ಪರಸ್ಪರ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಯಿತಾದರೂ, ಅವಳಿ ನಗರದಲ್ಲಿ ಬಿಜೆಪಿ ಬದ್ರವಾಗಿ ನೆಲೆಯೂರುವಂತೆ ಮಾಡಿತು. ಅಂದಿನಿಂದ ಜಗದೀಶ್ ಶೆಟ್ಟರ್ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತದೆ ಬಂದಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಯಾದರೂ ಕೂಡ ,ಇವರ ಗೆಲುವಿಗೆ ಯಾವುದೇ ಅಡ್ಡಿ ಆತಂಕ ಸೃಷ್ಟಿಯಾಗಿಲ್ಲ.
ಈ ರೀತಿಯಲ್ಲಿ ಸತತ ಗೆಲುವು ಸಾಧಿಸುತ್ತಿರುವ ಜಗದೀಶ್ ಶೆಟ್ಟರ್, ದಿವಂಗತ ಎಸ್ ಬಂಗಾರಪ್ಪ, ರಾಮಕೃಷ್ಣ ಹೆಗಡೆ ಮಾಜಿ ಪ್ರಧಾನಿ ದೇವೇಗೌಡ , ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ಅವರಂತೆ ಮಾಸ್ ಲೀಡರ್ ಅಲ್ಲ. ಜೊತೆಗೆ ಸಮುದಾಯದ ನಾಯಕರು ಕೂಡಾ ಅಲ್ಲ. ಪ್ರಬಲ ಹಿಂದುತ್ವದ ಪ್ರತಿಪಾದಕರಂತೂ ಅಲ್ಲವೇ ಅಲ್ಲ.ದೊಡ್ಡ ಹಿಂಬಾಲಕರ ಪಡೆಯೇನೂ ಇವರಿಗಿಲ್ಲ. ಇವರೊಬ್ಬ ಸೌಮ್ಯವಾದಿ.
ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದ ಸರಳ, ಸಜ್ಜನ ಎಂಬ ಹೆಗ್ಗಳಿಕೆಯೊಂದಿಗೆ ಜನರ ವಿಶ್ವಾಸ ಗಳಿಸಿದ್ದಾರೆ. ಪ್ರಬಲ ಹಿಂದುತ್ವ ಪರವಾದ ಅಲೆಯೊಂದಿಗೆ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದರೂ ಕೂಡ ಇವರೆಂದಿಗೂ ಕಟ್ಟರ್ ಹಿಂದುತ್ವವಾದಿಯಾಗಿ ಗುರುತಿಸಿಕೊಂಡಿಲ್ಲ ಇದೇ ಅವರ ವಿಶೇಷ. ಆದರೆ ಸದಾ ಅದೃಷ್ಟ ಇವರ ಹೆಗಲಿಗಿದೆ. ಈ ಬಾರಿ ಈ ಅದೃಷ್ಟ ಅವರನ್ನು ಹೇಗೆ ಕಾಪಾಡಲಿದೆ ಎನ್ನುವುದೇ ಸದ್ಯದ ವಿಶೇಷ.
1999 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸಂಯುಕ್ತ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯಿತು. ಅಂದಿನ ಚುನಾವಣಾ ಒಳೇಟಿಗೆ ಬಿಜೆಪಿ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ ಬಲಿಯಾದರು. ಆದರೂ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಂಡಿತು. ಅಂದು ನಡೆದ ಪ್ರತಿಪಕ್ಷ ನಾಯಕನ ಆಯ್ಕೆಯ ಪೈಪೋಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಕೇಳಿ ಬಂದ ಹೆಸರು ಹಿರಿಯ ನಾಯಕ ದಿವಂಗತ ಬಿಬಿ ಶಿವಪ್ಪ ಅವರದಾಗಿತ್ತು. ಆದರೆ ಅಂದು ದಿವಂಗತ ಅನಂತಕುಮಾರ್ ನಡೆಸಿದ ರಾಜಕೀಯ ಚಾಣಾಕ್ಷ ನಡೆ ಶಿವಪ್ಪ ಅವರನ್ನು ಆ ಹುದ್ದೆಯಿಂದ ದೂರ ಇರುವಂತೆ ಮಾಡಿತು .ಆಗ ಸಹಜವಾಗಿಯೇ ಕೇಳಿ ಬಂದ ಹೆಸರು ಮಹತ್ವಾಕಾಂಕ್ಷೆಯಲ್ಲದ ಸಜ್ಜನ ಜಗದೀಶ್ ಶೆಟ್ಟರ್ ಅವರದ್ದು.
ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಯಡಿಯೂರಪ್ಪ ಅವರು ಚುಕ್ಕಾಣಿ ಹಿಡಿಯಲು ಅವರಷ್ಟೇ ಹಿರಿಯರಾದ ಬಿಬಿ ಶಿವಪ್ಪ ಅಡ್ಡಿ ಆಗಬಾರದು, ಎಂಬ ದೂರದೃಷ್ಟಿಯಿಂದ ಶೆಟ್ಟರ್ ಅವರನ್ನು ಪ್ರತಿಪಕ್ಷ ನಾಯಕನಾಗಿ ಪ್ರತಿಷ್ಠಾಪಿಸಲಾಯಿತು. ಈ ರೀತಿ ಅದೃಷ್ಟದ ನಾಯಕನಾಗಿ ಹೊರಹೊಮ್ಮಿದ ಜಗದೀಶ್ ಶೆಟ್ಟರ್, ಆನಂತರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅನಂತ ಕುಮಾರ್ ತಮ್ಮ ಹುದ್ದೆ ತೆರವು ಮಾಡುವ ವೇಳೆ ಯಡಿಯೂರಪ್ಪ ಅವರನ್ನು ಆ ಹುದ್ದೆಯಿಂದ ದೂರ ಇಡಲು ಬಳಸಿಕೊಂಡಿದ್ದು ಜಗದೀಶ್ ಶೆಟ್ಟರ್ ಅವರನ್ನು. ಹೀಗಾಗಿ ಶೆಟ್ಟರ್ ರಾಜ್ಯ ಬಿಜೆಪಿಯ ಅಧ್ಯಕ್ಷರು ಆದರು.
ಕಾಲಾನಂತರದಲ್ಲಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಶೆಟ್ಟರ್ ಕಂದಾಯ ಮಂತ್ರಿಯಾದರು. ಆನಂತರ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಶೆಟ್ಟರ್ ವಿಧಾನ ಸಭೆಯ ಅಧ್ಯಕ್ಷರಾದರು. ಆಗ ಮಾತ್ರ ಶೆಟ್ಟರ್ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಆರೋಪಿಸಿ ಅವರ ಬೆಂಬಲಿಗರು ಧಾರವಾಡ ಜಿಲ್ಲೆಯ ಹಲವೆಡೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವ ಮೂಲಕ ಶೆಟ್ಟರ್ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ನಾಯಕ ಎಂಬಂತೆ ಗುರುತಿಸಲ್ಪಟ್ಟರು. ಆದರೂ ಅವರು ಸಭಾಧ್ಯಕ್ಷ ಹುದ್ದೆಗೆ ತೃಪ್ತಿ ಪಡಬೇಕಾಯಿತು. ಬಳಿಕ ನಡೆದ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಮತ್ತೊಮ್ಮೆ ಶೆಟ್ಟರ್ ಅವರನ್ನು ಅದೃಷ್ಟ ಅರಸಿ ಬಂದು ಅವರು ರಾಜ್ಯದ ಮುಖ್ಯಮಂತ್ರಿಯ ಹುದ್ದೆ ಅಲಂಕರಿಸಿದರು.
ಎಲ್ಲಾ ಸಮಯದಲ್ಲೂ ಅವರನ್ನು ಕೈ ಹಿಡಿದಿದ್ದು ಅವರೊಬ್ಬ ಜನಪ್ರಿಯ, ಜನಾನುರಾಗಿ, ಮಾಸ್ ಲೀಡರ್ ಅಥವಾ ಸಮುದಾಯದ ಅತಿ ದೊಡ್ಡ ನಾಯಕ ಎಂದೇನು ಅಲ್ಲ .ಬದಲಿಗೆ ,ಇವರೊಬ್ಬ ಸೌಮ್ಯವಾದಿ ರಾಜಕೀಯವಾಗಿ ದೊಡ್ಡ ಮಹತ್ವಾಕಾಂಕ್ಷೆ ಇಲ್ಲದವರು ತಮ್ಮ ಸರದಿ ಬರುವವರೆಗೆ ಅವರು ಆ ಹುದ್ದೆಯನ್ನು ತಮಗಾಗಿ ಜತನದಿಂದ ಕಾಯ್ದುಕೊಂಡು ಬರುತ್ತಾರೆ ಎಂಬ ನಿರೀಕ್ಷೆಯಿಂದ ಮಾತ್ರ. ಈ ನಿರೀಕ್ಷೆಯನ್ನು ಅನಂತಕುಮಾರ್ ಮತ್ತು ಯಡಿಯೂರಪ್ಪ ಕಾಲಕಾಲಕ್ಕೆ ಶೆಟ್ಟರ್ ಮೇಲೆ ಇಟ್ಟಿದ್ದರು.
ಇಂತಹ ಜಗದೀಶ್ ಶೆಟ್ಟರ್ ಅವರ ನಾಯಕತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆ ಎದುರಿಸಿತಾದರೂ ಪಕ್ಷ ಮಕಾಡೆ ಮಲಗಿತು. ಜಾತ್ಯತೀತ ಜನತಾದಳ ಎಷ್ಟು ಕ್ಷೇತ್ರದಲ್ಲಿ ಆರಿಸಿ ಬಂತೋ ಅಷ್ಟೇ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತು.ಶೇಕಡವಾರು ಮತಗಳಿಕೆ ಆಧಾರದಲ್ಲಿ ಜೆಡಿಎಸ್ ಪ್ರತಿಪಕ್ಷ ಸ್ಥಾನದಲ್ಲಿ ಕೂರುವಂತಾಯಿತು.ಇದು ಶೆಟ್ಟರ್ ಅವರ ನಾಯಕತ್ವಕ್ಕೆ ಬಿಜೆಪಿ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿತ್ತು.
ಇದಾದ ನಂತರ ಮತ್ತೆ ಯಡಿಯೂರಪ್ಪ ಬಿಜೆಪಿ ಸೇರಿ ಪಕ್ಷ ಅಧಿಕಾರದ ಸನಿಹಕ್ಕೆ ಬಂದಿತು. ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ನಂತರದಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿ ಆಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ನಿರ್ಮಿಸಿದರು.
ಬಿಜೆಪಿಯಲ್ಲಿ ಮತ್ತೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಯಡಿಯೂರಪ್ಪ ಮಾಜಿಯಾದರು. ಆಗ ಮತ್ತೊಮ್ಮೆ ಶೆಟ್ಟರ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿತ್ತು . ಆದರೆ, ಬಸವರಾಜ ಬೊಮ್ಮಾಯಿ ಆ ಹುದ್ದೆ ಅಲಂಕರಿಸುವ ಮೂಲಕ ಶೆಟ್ಟರ್ ಮೂಲೆಗುಂಪಾದರು. ತಮಗಿಂತ ಕಿರಿಯರಾದ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಆಗುವುದಿಲ್ಲ ಎಂಬ ದೃಢ ನಿಲುವು ತಳೆದರು.
ಇದೀಗ ಮತ್ತೆ 7ನೇ ಬಾರಿ ಬಿಜೆಪಿಯಿಂದ ಶಾಸನಸಭೆ ಪ್ರವೇಶಿಸುವ ಅವರ ಕನಸಿಗೆ ಹೈಕಮಾಂಡ್ ಅಡ್ಡಿಯಾಗಿದ್ದು ಕಾಂಗ್ರೆಸ್ ನಲ್ಲಿ ಭವಿಷ್ಯ ಅರಸಿ ಹೊರಟಿದ್ದಾರೆ.
ಶೆಟ್ಟರ್ ಸಜ್ಜನ, ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಇಲ್ಲದವರು. ಮತ್ತು ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ ,ಎಂಬುದಾಗಿ ಕಾಂಗ್ರೆಸ್ ಇವರನ್ನು ಬಿಂಬಿಸುವ ಮೂಲಕ ರಾಜಕೀಯವಾಗಿ ಲಾಭ ಪಡೆಯಲು ಪ್ರಯತ್ನಿಸಿದೆ.
ಅದೃಷ್ಟದ ಮೂಲಕವೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದ ಶೆಟ್ಟರ್ ಕಾಂಗ್ರೆಸ್ಸಿನ ಅದೃಷ್ಟದ ಬಾಗಿಲನ್ನು ತೆರೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ…