ಅನ್ವೇಷಣೆಯ ಹಾದಿಯಲ್ಲಿ ಸೋಲು ಎಂಬುದು ಸಹಜ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಗಳು ಹೇಳುತ್ತಿರುತ್ತಾರೆ. ಒಂದು ಸಂಸ್ಥೆಯ ಗೆಲುವಿನ ಸಾಧ್ಯತೆಯ ಬಗ್ಗೆ ಸ್ಪಷ್ಟವಾದ ಖಚಿತತೆ ಇಲ್ಲದಿದ್ದರೂ ಅಂಥಾ ಸಂಸ್ಥೆಯ ತಳಹದಿಯಾಗಿರುವ ಒಂದು ವಿಶೇಷ ಐಡಿಯಾ ಮೇಲೆ ಹಣ ಹಾಕಿ ಒಂದು ರೀತಿಯ ಜೂಜಾಡುವ ವೆಂಚರ್ ಕ್ಯಾಪಿಟಲಿಸ್ಟ್ ಗಳು ಹಣ ಹಾಕಿ ಕಳೆದುಕೊಂಡಿದ್ದು ಅನೇಕ ಸ್ಟಾರ್ಟ್ ಅಪ್ ಗಳಲ್ಲಿ. ಯಾವತ್ತೂ ಅನೇಕ ಸ್ಟಾರ್ಟ್ ಅಪ್ ಗಳು ಆರಂಭವಾದರೆ ಅವುಗಳ ಪೈಕಿ ಗೆಲ್ಲುವುದು ಕೆಲವೇ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ಟ್ ಅಪ್ ಗಳೂ ಅವನತಿಯ ಅಂಚನ್ನು ತಲುಪಿ ಬಿಟ್ಟಿವೆ ಎಂದು ಹೇಳಲಾಗುತ್ತಿದೆ. ಇದನ್ನು ಪರಿಗಣಿಸಿ ಓರ್ವ ಹೂಡಿಕೆದಾರನಂತು ಈಗ ಸ್ಟಾರ್ಟ್ ಅಪ್ ಗಳ ಸಾಮೂಹಿಕ ಅವನತಿ ಆರಂಭವಾಗಿಬಿಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅನೇಕ ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸಿದ ಟಾಮ್ ಲೊವೆರ್ರೋ ಹೇಳುವ ಪ್ರಕಾರ ಸ್ಟಾರ್ಟ್ ಅಪ್ ಗಳು ಸಾಯುವುದು ಸುದ್ದಿಯಾಗುವುದಿಲ್ಲ. ಏಕೆಂದರೆ ಅದು ಒಳ್ಳೆಯ ಸುದ್ದಿಯಲ್ಲ. ಕೆಲವೊಮ್ಮೆ ಸ್ಟಾರ್ಟ್ ಅಪ್ ಗಳು ಕ್ರಮೇಣ ಸಾಯುವುದಿಲ್ಲ ಆ ಸಂಸ್ಥೆಗಳು ಧಿಡೀರನೆ ಬಾಗಿಲು ಮುಚ್ಚಿಬಿಡುತ್ತವೆ. ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ ಕಂಪನಿಗಳು ಎಲ್ಲಾ ಸ್ಟಾರ್ಟ್ ಅಪ್ ಗಳು ಗೆಲ್ಲುತ್ತವೆ ಎನ್ನುವ ಭ್ರಮೆಯಲ್ಲಿರುವುದಿಲ್ಲ ಆದರೂ ಹೂಡಿಕೆ ಮಾಡಿರುತ್ತವೆ. 2021ರಲ್ಲಿ ಕೆಲವು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಸ್ಟಾರ್ಟ್ ಅಪ್ ಗಳಲ್ಲಿ ಯದ್ವಾತದ್ವಾ ಹೂಡಿಕೆ ಮಾಡಿದ್ದವು. ಆದ್ದರಿಂದ ಸಾಯಬೇಕಿದ್ದ ಸ್ಟಾರ್ಟ್ ಅಪ್ ಗಳೂ ಕೂಡ ಇನ್ನಷ್ಟು ದಿನ ಬದುಕಿ ಉಳಿದವು. ಆದರೆ ಈಗ ಹಣದ ಹರಿವು ನಿಂತಿದೆ. ಹೇಳಬೇಕೆಂದರೆ ಹಣ ಬರುತ್ತಿದ್ದ ಕೊಳವೆ ಒಣಗಿ ಹೋಗಿದೆ. ಹೊಸ ಹೂಡಿಕೆ ಬರುತ್ತಿಲ್ಲ ಹೂಡಿಕೆಯಾಗಿದ್ದ ಹಣ ಖಾಲಿಯಾಗಿದೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಹೂಡಿಕೆ ಮಾಡಿದ್ದ ಹಣ ದುರುಪಯೋಗವಾಗಿ ಯಾವುದಕ್ಕೆ ಬಳಸಲ್ಪಡಬೇಕಿತ್ತೋ ಅದಕ್ಕೆ ಬಳಕೆಯಾಗದೆ ಆ ಕಂಪನಿಗಳು ಸಾಯುವ ಹಂತ ತಲುಪಿವೆ. ಭಾರತದಲ್ಲಿ ಇಂಥಾ ಅನೇಕ ಕಂಪೆನಿಗಳಿರುವುದು ಬೇಸರದ ಸಂಗತಿ ಎಂದು ಹೇಳಲಾಗುತ್ತಿದೆ.
ಕ್ರಂಚ್ ಬೇಸ್ ಪ್ರಕಾರ ಈ ವರ್ಷ ಒಂದರಲ್ಲೇ ಎಪ್ಪತ್ತೆರಡು ಸ್ಟಾರ್ಟ್ ಅಪ್ ಗಳು ಮುಚ್ಚಲ್ಪಟ್ಟಿವೆ. ಲೊವೆರ್ರೋ ಪ್ರಕಾರ ಮುಂದಿನ ಎರಡು ವರ್ಷಗಳು ಸ್ಟಾರ್ಟ್ ಅಪ್ ಗಳಿಗೆ ದುರಂತಮಯ ವರ್ಷಗಳಾಗಲಿವೆ.