ಬೆಂಗಳೂರು, ಜು.7- ವಿಧಾನಸಭೆ ಶಾಸಕರಿಗಾಗಿ ಮೀಸಲಿಟ್ಟ ವೇದಿಕೆ. ಕಲಾಪ ನಡೆಯುವಾಗ ಶಾಸಕರಲ್ಲದವರು ಇಲ್ಲಿ ಪ್ರವೇಶಿಸಲು ಸಾಧ್ಯವೇ ಇಲ್ಲ.ಆದರೆ ಇಂದು ನಡೆದ ಬಜೆಟ್ ಕಲಾಪದಲ್ಲಿ ಖಾಸಗಿ ವ್ಯಕ್ತಿಯೊಬ್ಬ ವಿಧಾನಸಭೆಯನ್ನು ಪ್ರವೇಶಿಸಿ ಶಾಸಕರ ಸಾಲಿನಲ್ಲಿ ಕೂತು ತೆರಳಿದ ಘಟನೆ ನಡೆದಿದೆ.
ಮಧ್ಯಾಹ್ನ 12 ಗಂಟೆಗೆ ಕಲಾಪ ಆರಂಭಗೊಂಡಾಗ ಶಾಸಕರು ಹಾಜರಾತಿ ಕಡಿಮೆ ಇತ್ತು. ಈ ವೇಳೆ ಶಾಸಕರಂತೆ ಫೋಸು ಕೊಟ್ಟು ಆಡಳಿತ ಪಕ್ಷದ ಶಾಸಕರ ಆಸನದಲ್ಲಿ ಸುಮಾರು 15 ನಿಮಿಷ ಕೂತು ಹೊರಗೆ ಹೋಗಿದ್ದಾನೆ.
ತಾನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಂದು ಪರಿಚಯ ಹೇಳಿಕೊಂಡು ಈ ವ್ಯಕ್ತಿ ಸದನದೊಳಗೆ ಪ್ರವೇಶಿಸಿದ್ದಾನೆ.ವಾಸ್ತವವಾಗಿ
ಮೊಳಕಾಲ್ಮೂರು ಕ್ಷೇತ್ರದಿಂದ ಅತ್ಯಂತ ಹಿರಿಯರಾದ ಎನ್.ವೈ.ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ. ಆದರೆ ತಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮಧ್ಯ ವಯಸ್ಕರಾಗಿದ್ದಾರೆ.
ಹೀಗಿದ್ದರೂ ಮಾರ್ಷಲ್ ಗಳು ಆತನನ್ನು ಒಳಗೆ ಬಿಟ್ಟಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಸದನದಲ್ಲಿ ಶಾಸಕರು ಪ್ರವೇಶಿಸುವ ಮುನ್ನ ಹಾಜರಿ ಪುಸ್ತಕದಲ್ಲಿ ಸಹಿ ಹಾಕಬೇಕು. ತಮ್ಮಲ್ಲಿರುವ ಮೊಬೈಲ್ ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಲ್ಲಿಯೇ ದಾಸ್ತಾನು ಮಾಡಬೇಕು ಆನಂತರವೇ ಸದನದಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ ಇಷ್ಟೆಲ್ಲ ನಿಯಮಗಳಿದ್ದರೂ ಆ ಅನಾಮಿಕ ವ್ಯಕ್ತಿ ಸದನ ಹೇಗೆ ಪ್ರವೇಶಿಸಿದರು ಎನ್ನುವುದು ಕುತೂಹಲದ ವಿಷಯವಾಗಿದೆ
ಶಾಸಕರಿಗೆ ಮೀಸಲಿಟ್ಟ ಆಸನದಲ್ಲಿ ಅನಾಮಿಕ ವ್ಯಕ್ತಿ ಒಬ್ಬ ಕುಳಿತಿರುವುದನ್ನು ಕಂಡ ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಆತನನ್ನು ನೋಡಿ ಅನುಮಾನಗೊಂಡು ಕೆಲ ಶಾಸಕರಿಗೆ ಅಲ್ಲಿ ಕೂತಿರುವವರು ಯಾರು ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.
ಅವರೂ ಕೂಡ ನಮಗೆ ಗೊತ್ತಿಲ್ಲ ಎಂದಾಗ, ತಕ್ಷಣ ಸ್ಪೀಕರ್ ಯು.ಟಿ.ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮಾರ್ಷಲ್‍ಗಳು ಬರುವಷ್ಟರಲ್ಲೇ ಅನಾಮಿಕ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇದು ವಿಧಾನಸಭೆಯ ಸಭಾಂಗಣದ ಒಳಗೆ ಕೇವಲ ಶಾಸಕರಿಗೆ ಮಾತ್ರ ಪ್ರವೇಶಿಸುವ ಅನುಮತಿ ಇದೆ. ಆದರೆ, ಅಲ್ಲಿ ಮಾರ್ಷೆಲ್‍ಗಳು ಹಾಗೂ ಸಹಾಯಕ ಸಿಬ್ಬಂದಿಗಳು ಮಾತ್ರ ಶಾಸಕರ ದಾಖಲೆಗಳು ಹಾಗೂ ಇತರೆ ಸೌಲಭ್ಯ ಕಲ್ಪಿಸಲು ಇರುತ್ತಾರೆ. ಹೀಗಿರುವಾಗ ಅನಾಮಿಕ ವ್ಯಕ್ತಿ ಹೇಗೆ ವಿಧಾನಸಭೆಯನ್ನು ಪ್ರವೇಶಿಸಿದ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ
ಆತನನ್ನು ವಿಚಾರಿಸಿದಾಗ ನಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡಿದ್ದಾನೆ. ಇದು ಭದ್ರತಾ ಲೋಪವಾಗಿದ್ದು, ತಕ್ಷಣ ವಿಧಾನಸೌಧ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ
Previous Articleಅಕ್ಕಿ ಬದಲಿಗೆ ಹಣ – ಹಿಂದೆ ಇದೆ ದೊಡ್ಡ ರಹಸ್ಯ
Next Article ಈ Traffic Jamಗೆ ಪರಿಹಾರವಿಲ್ಲವೆ?