ಬೆಂಗಳೂರು, ಸೆ.13 – ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸದ ಪರಿಣಾಮ ರಾಜ್ಯದಲ್ಲಿ ಬರಗಾಲದ (Drought) ಛಾಯೆ ಆವರಿಸಿದೆ.ಈ ಸಂಬಂಧ ಅಧಿಕಾರಿಗಳ ವರದಿ ಆಧರಿಸಿ 195 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ತೀರ್ಮಾನಿಸಿದೆ.
ಬರ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ,ರಾಜ್ಯದ ಒಟ್ಟು 195 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕಾಗಿದೆ. ಇದರಲ್ಲಿ 161 ತಾಲ್ಲೂಕು ತೀವ್ರ ಬರಪೀಡಿತವಾಗಿವೆ.34 ತಾಲ್ಲೂಕುಗಳು ಸಾಧಾರಣ ಬರಪೀಡಿತ ತಾಲ್ಲೂಕುಗಳಾಗಿವೆ. ಮತ್ತೆ ಪರಿಶೀಲನೆ ನಡೆಸಿ ಇನ್ನೂ 40 ತಾಲ್ಲೂಕುಗಳನ್ನು ಹೆಚ್ಚುವರಿಯಾಗಿ ಬರಪೀಡಿತವೆಂದು ಘೋಷಣೆ ಮಾಡಲಾಗುತ್ತದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆ ಇದೆ. ಅದರಲ್ಲೂ ಮಲೆನಾಡಿನಲ್ಲಿ ಶೇ.40ರಷ್ಟು, ದಕ್ಷಿಣ ಒಳನಾಡಿನಲ್ಲೂ ತೀವ್ರ ಕೊರತೆ ಇದೆ.ಬರ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳ ಮೇವಿಗೆ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸದ್ಯ ಜಿಲ್ಲಾಧಿಕಾರಿಗಳ ಬಳಿ 480 ಕೋಟಿ ರೂಪಾಯಿ ಹಣವಿದೆ. ಸದ್ಯಕ್ಕೆ ರಾಜ್ಯದಲ್ಲಿ ಎಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಬರಪೀಡಿತ ಪ್ರದೇಶಗಳಿಗೆ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ 10 ದಿನದಲ್ಲಿ ಮನವಿ ಪತ್ರ ಸಲ್ಲಿಸಲಾಗುವುದು.ಬರಪೀಡಿತ ಪ್ರದೇಶಗಳ ಘೋಷಣೆಗೆ ಸಂಬಂಧಿಸಿದಂತೆ ಇರುವ ಮಾರ್ಗಸೂಚಿಗಳನ್ನು ಬದಲಾಯಿಸಲು ಜುಲೈನಲ್ಲಿ ಪ್ರಧಾನಿಯವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು, ಪ್ರಧಾನಿಯವರ ಸಮಯವನ್ನು ಕೋರಿದ್ದು, ಸಮಯ ಸಿಕ್ಕರೆ ಮಾರ್ಗಸೂಚಿ ಬದಲಾವಣೆ ಮಾಡುವಂತೆ ಒತ್ತಾಯ ಮಾಡಲಾಗುತ್ತದೆ ಎಂದು ಹೇಳಿದರು.
ಸದ್ಯ ಬರಪೀಡಿತ ತಾಲೂಕುಳಿಗೆ ಸಂಬಂಧಿಸಿದಂತೆ ಸಿದ್ಧ ಪಡಿಸಿರುವ ಪಟ್ಟಿ ಅಂತಿಮವಲ್ಲ ಇನ್ನು 15 ದಿನಗಳ ಕಾಯ್ದು ಎರಡನೇ ಸುತ್ತಿನಲ್ಲಿ ಬರ ಘೋಷಣೆ ಮಾಡಲಾಗುವುದು. ಪ್ರಸ್ತುತ ಸಮೀಕ್ಷೆ ಅನ್ವಯ ಲಭ್ಯವಿರುವ ವರದಿ ಅನ್ವಯ 195 ತಾಲೂಕುಗಳು ಬರ ಪೀಡಿತ ಪ್ರದೇಶಗಳಾಗಿವೆ. ಆದರೆ ಈಗಿರುವ ತಾಲೂಕುಗಳಿಗಿಂತ ಇನ್ನು ಹೆಚ್ಚಿನ ಪ್ರದೇಶಗಳು ಬರಪೀಡಿತ ಪ್ರದೇಶಗಳಿಗೆ ಒಳಪಡಬಹುದಾದ ಸಾಧ್ಯತೆ. ಮಲೆನಾಡು ಭಾಗದಲ್ಲೂ ತೀವ್ರ ನೀರಿನ ಕೊರತೆ ಉಂಟಾಗಿದ್ದು, ನಮಗೆ ನೀರು ದೊರಕುತ್ತಿಲ್ಲ ಎಂದ ಅವರು, ರಾಜ್ಯದಲ್ಲಿ ಒಟ್ಟಾರೆ ಶೇ.40 ರಷ್ಟು ಬರದ ಪರಿಸ್ಥಿತಿ ಇದ್ದು, ದಕ್ಷಿಣ ಒಳನಾಡಿನಲ್ಲೂ ಬರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಆದರೆ ಕೂಲಿ ಪ್ರಮಾಣ 307 ರೂ. ಮಾತ್ರ ಇರಲಿದೆ.ಇದನ್ನು ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಲಾಗುವುದು ಎಂದು ಹೇಳಿದರು.