ಬೆಂಗಳೂರು,ನ.24: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಆಗೋದಿಲ್ಲ, ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದರು, ಆದರೆ, ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಶತಕೋಟಿ ಸಂಭ್ರಮ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯ (Shakti Scheme) ಶತಕೋಟಿ ಸಂಭ್ರಮ ಕಾರ್ಯಕಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯಾವ ಸರ್ಕಾರಗಳೂ ಹಿಂದೆಂದೂ ಮಾಡದ ಸಾಧನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿ ತೋರಿಸಿದೆ, ಬಿಜೆಪಿಯವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದರು.
ಕಳೆದ ಜೂನ್ 11ಕ್ಕೆ ಶಕ್ತಿ ಯೋಜನೆ ಜಾರಿಯಾಗಿದ್ದು, ಈ ತಿಂಗಳ 23ರ ವರೆಗೆ ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ 100 ಕೋಟಿ 47 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.ಒಟ್ಟು ಬಸ್ ಪ್ರಯಾಣಿಕರ ಪೈಕಿ ಉಚಿತ ಪ್ರಯಾಣ ಮಾಡಿದವರಲ್ಲಿ ಶೇಕಡಾ 55 ರಷ್ಟು ಮಹಿಳೆಯರೇ ಸೇರಿದ್ದಾರೆ, ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವುದು ಸರ್ಕಾರದ ಗುರಿ, ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು
ಒಂದು ಕೋಟಿ 17 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಇವರಲ್ಲಿ ಒಂದು ಕೋಟಿ 10 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ತಲುಪುತ್ತಿದೆ ಎಂದು ತಿಳಿಸಿದರು.
ಎಲ್ಲಾ ಜಾತಿ-ಧರ್ಮದ ಬಡವರು ಮಧ್ಯಮ ವರ್ಗದವರ ಮಹಿಳೆಯರಿಗೆ ಈ ಸೌಲಭ್ಯ ತಲುಪುತ್ತಿದೆ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಜತೆಗೆ ಸಮಾಜದ ಎಲ್ಲಾ ವರ್ಗದ ಬಡವರಿಗೆ-ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವಲ್ಲಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋಟಿ-ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ಹಾಗೂ ಅಕ್ಕಿಯ ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತಿದ್ದೇವೆ.ಬಡವರ ಕೈಯಲ್ಲಿ ಹಣ ಇದ್ದರೆ ಆರ್ಥಿಕತೆಗೆ ಚೈತನ್ಯ ಬರುತ್ತದೆ, ಇದನ್ನು ಸಾಧಿಸಿ ತೋರಿಸಿದ್ದೇವೆ, ಜನರಿಗೆ ಕೊಟ್ಟ ಹಣ ವಾಪಾಸ್ ಸರ್ಕಾರಕ್ಕೇ ಬರುತ್ತದೆ, ಅದೇ ಹಣವನ್ನು ಪುನಃ ಜನರ ಜೇಬಿಗೆ ಹಾಕುತ್ತೇವೆ, ಇದರಿಂದ ಜಿಡಿಪಿ, ಆರ್ಥಿಕ ಚಟುವಟಿಕೆ ವೃದ್ಧಿಯಾಗುತ್ತದೆ ಎಂದರು.
ನೇಮಕಾತಿ:
ಇದೇ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ ಒಂಭತ್ತು ಸಾವಿರ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕಳೆದ ಏಳು ವರ್ಷದಿಂದ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳು ನೇಮಕವಾಗಿಲ್ಲ. ಈ ಅವಧಿಯಲ್ಲಿ 13 ಸಾವಿರ ಸಿಬ್ಬಂದಿ ನಿವೃತ್ತಿಯಾಗಿದ್ದಾರೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ 5,500 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಲಾಗುವುದು. ಸಂಕಷ್ಟದ ಸಂದರ್ಭದಲ್ಲೂ ಶಕ್ತಿ ಯೋಜನೆ ಮೂಲಕ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಯಿತು ಎಂದು ಹೇಳಿದರು.
ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಶಕ್ತಿಯೂ ಒಂದಾಗಿದ್ದು, ಅಧಿಕಾರಕ್ಕೆ ಬಂದ 15 ದಿನದಲ್ಲೆ ಜಾರಿಗೆ ತಂದಿದ್ದೇವೆ. ದೇಶದಲ್ಲಿಯೇ ಇದು ದೊಡ್ಡ ಕಾರ್ಯಕ್ರಮ. ತಮಿಳುನಾಡು ಮತ್ತು ದೆಹಲಿಯಲ್ಲಿ ನಗರ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ. ಮಹಾರಾಷ್ಟ್ರದಲ್ಲಿ ಶೇ.50ರಷ್ಟು ರಿಯಾಯ್ತಿ ಇದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿದೆ ಎಂದು ಸಚಿವರು ತಿಳಿಸಿದರು. ಶಕ್ತಿ ಯೋಜನೆ ಆರಂಭದಿಂದ ಈತನಕ 1.58 ಲಕ್ಷ ಟ್ರಿಪ್‍ಗಳಲ್ಲಿ ಶತಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ಈ ಯೋಜನೆ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿನಿಯರು, ಮಹಿಳೆಯರು ಪ್ರವಾಸಿ ಕೇಂದ್ರಗಳು, ಯಾತ್ರಾ ಸ್ಥಳಗಳಿಗೆ, ದೇವಾಲಯಗಳಿಗೆ ಖುಷಿಯಿಂದ ಹೋಗುತ್ತಿದ್ದಾರೆ. ಕೆ.ಎಸ್.ಆರ್. ಸಿ.ಟಿ.ಯಲ್ಲಿ 1 ಕೋಟಿ ರೂ.ವರೆಗೂ ಹಾಗು ಇತರೆ ಸಂಸ್ಥೆಗಳಲ್ಲಿ 50 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ ಒದಗಿಸಲಾಗಿದ್ದು, ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. 15 ವರ್ಷ ಅಪಘಾತ ರಹಿತ ವಾಹನ ಚಾಲನೆ ಮಾಡಿದ ಚಾಲಕರಿಗೆ ಮುಖ್ಯಮಂತ್ರಿಗಳು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. ದೇಶದಲ್ಲೇ ಅತಿಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೆಎಸ್‍ಆರ್‍ಟಿಸಿಗೆ ಲಭಿವಿಸಿವೆ ಎಂದರು.