ಬೆಂಗಳೂರು – ಅತ್ಯಂತ ರುಚಿಕರ ಹಾಗೂ ಗುಣಮಟ್ಟದಆಹಾರ ಪದಾರ್ಥಗಳಿಗೆ ಹೆಸರಾದ ಎಂಟಿಆರ್ ಮುಕುಟಕ್ಕೆ ಮತ್ತೊಂದು ಗರಿ ಬಂದಿದೆ.ಹಲವಾರು ವೈವಿಧ್ಯಮಯ ಪ್ರಯೋಗಗಳಿಗೆ ಹೆಸರಾಗಿರುವ ಎಂಟಿಆರ್ ಇದೀಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಎಂಟಿಆರ್ ಫುಡ್ಸ್ ತನ್ನ ನೂರನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಬೊಮ್ಮಸಂದ್ರದಲ್ಲಿ ಇರುವ ಕಂಪನಿಯ ಫ್ಯಾಕ್ಟರಿಯಲ್ಲಿ ಈ ದೋಸೆ ತಯಾರಿಸಲು ತನ್ನದೇ ಉತ್ಪನ್ನವಾದ ಸಿಗ್ನೇಷರ್ ರೆಡ್ ಬ್ಯಾಟರ್ ಅನ್ನು ಬಳಸಿಕೊಂಡಿದೆ.
ಎಂಟಿಆರ್ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾರ್ಗದರ್ಶನದಡಿ ಆಹಾರ ತಜ್ಞರು ಮತ್ತು ಪಾಕಶಾಲೆಯ ಸಿಬ್ಬಂದಿ ಒಳಗೊಂಡ 75 ಬಾಣಸಿಗರ ತಂಡವು ದೋಸೆ ತಯಾರಿಸಿತು. ದಾಖಲೆ ನಿರ್ಮಿಸಿದ ಬಳಿಕ ಎಂಟಿಆರ್ ಉದ್ಯೋಗಿಗಳ ಜೊತೆಗೆ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದನ್ನು ಹಂಚಲಾಯಿತು.
ಈ ವೇಳೆ ಮಾತನಾಡಿದ ಎಂಟಿಆರ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್, ‘ನಾವು 100 ಅಡಿ ಉದ್ದದ ದೋಸೆ ತಯಾರಿಸಲು ಪ್ರಯತ್ನಿಸಿದ್ದೆವು. ಅದನ್ನು ಮೀರಿ 123 ಅಡಿ ಉದ್ದದ ದೋಸೆ ತಯಾರಿಸಿದ್ದೇವೆ. ಇದು ಹೆಮ್ಮೆಯ ಕ್ಷಣವಾಗಿದೆ’ ಎಂದರು.
ದೋಸೆಯು ಮೊದಲಿನಿಂದಲೂ ಎಂಟಿಆರ್ ಪರಂಪರೆಯ ಭಾಗವಾಗಿದೆ. ಇಂದಿಗೂ ಗ್ರಾಹಕರು ಬಯಸುವ ಕಂಪನಿಯ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಈ ಖಾದ್ಯವು ವಿಶ್ವದಾದ್ಯಂತ ಗುರುತಿಸಲ್ಪಟ್ಟಿದೆ ಎಂದು ಹೇಳಿದರು