ಬೆಂಗಳೂರು, ಆ.16:
ಏಕ ಪಕ್ಷಿಯ ತೀರ್ಮಾನಗಳ ಮೂಲಕ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಧಿಕಾರಕ್ಕೆ ಕತ್ತರಿ ಹಾಕುವ ತೀರ್ಮಾನ ತೆಗೆದುಕೊಳ್ಳುವ ಮೂಲಕ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕದಲ್ಲಿ ಉಂಟಾಗಿರುವ ಭಿನ್ನಮತಕ್ಕೆ ತೇಪೆ ಹಚ್ಚಲು ಮುಂದಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ರ ಹಾಗೂ ರಾಜ್ಯದ ಪ್ರಭಾವಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ವಿಜಯೇಂದ್ರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪ ಎದುರಿಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ದೊಡ್ಡ ಆರೋಪವನ್ನು ಎದುರಿಸುತ್ತಿರುವ ವಿಜಯೇಂದ್ರ ಪಕ್ಷ ಸಂಘಟನೆ ವಿಷಯದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಲಾಗಿದೆ.
ಅದರಲ್ಲೂ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆದ ಪಾದಯಾತ್ರೆ, ಸಂಪೂರ್ಣ ಏಕಪಕ್ಷಿಯವಾಗಿತ್ತು ಇದರಿಂದ ಪಕ್ಷದ ಸಂಘಟನೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಹಿರಿಯ ನಾಯಕರು ಗುಂಪು ಇದೀಗ ವಿಜಯೇಂದ್ರ ಬದಲಾವಣೆಗೆ ಕೊಟ್ಟು ಹಿಡಿದಿದೆ. ಅಲ್ಲದೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಇತರೆ ಯೋಜನೆಗಳಿಗೆ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಸಜ್ಜುಗೊಂಡಿದೆ.
ಪಕ್ಷದ ಹಿರಿಯ ನಾಯಕರ ಈ ಚಿಂತನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಹೈಕಮಾಂಡ್ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಸೂಚಿಸಿದೆ ಹೈಕಮಾಂಡ್ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದ ಅವರು ಮೊದಲಿಗೆ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಆನಂತರ ಪಕ್ಷದ ಇತರೆ ನಾಯಕರು ಜೊತೆಗೂ ಸಮಾಲೋಚನೆ ನಡೆಸಿದ್ದಾರೆ.
ಎಲ್ಲರಿಂದಲೂ ಮಾಹಿತಿ ಪಡೆದ ಅವರು ನಿನ್ನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಕಚೇರಿ ಕೇಶವ ಶಿಲ್ಪ ದಲ್ಲಿ ಸಂಘ ಪರಿವಾರ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಪರಿವಾರದ ಪ್ರಮುಖ ನಾಯಕರಾದ ವಿ. ನಾಗರಾಜ್, ಮುಕುಂದ್ , ಗುರುಪ್ರಸಾದ್ ನಾ ತಿಪ್ಪೇಸ್ವಾಮಿ ಸೇರಿದಂತೆ ಕೆಲವರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಪಕ್ಷದ ಹಿರಿಯ ನಾಯಕರು ಮತ್ತು ಸಂಘ ಪರಿವಾರ ನಾಯಕರ ಅಭಿಪ್ರಾಯ ಪಡೆದಿರುವ ಸಂತೋಷ್ ಅವರು ಇದೀಗ ಹೈಕಮಾಂಡ್ ಗೆ ವರದಿಯೊಂದನ್ನು ಸಲ್ಲಿಸಲಿದ್ದಾರೆ. ಇದರ ಅನ್ವಯ ಪಕ್ಷದ ರಾಜ್ಯ ಘಟಕಕ್ಕೆ ವಿಭಾಗವಾರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಬೇಕು. ಪಕ್ಷ ಇನ್ನು ಮುಂದೆ ಯಾವುದೇ ಹೋರಾಟ ಮತ್ತು ಸಂಘಟನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ವಿಭಾಗವಾರು ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಕಡ್ಡಾಯವಾಗಿ ಚರ್ಚೆ ಮಾಡಬೇಕು ಎಂಬ ಕಟ್ಟಪ್ಪಣೆ ವಿಧಿಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಇದರ ಜೊತೆಗೆ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಪಕ್ಷದ ಹೈಕಮಾಂಡ್ ಸೂಚನೆ ನೀಡಬೇಕು ವರಿಷ್ಠರ ಮಾರ್ಗದರ್ಶನದಂತೆ ಪಾದಯಾತ್ರೆಯ ವೇಳಾಪಟ್ಟಿ ಮತ್ತು ರೂಪರೇಷೆ ಸಿದ್ದ ಪಡಿಸಬೇಕು ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ . ಈ ಮೂಲಕ ವಿಜಯೇಂದ್ರ ಅವರು ನಾನು ಪಕ್ಷದ ಅಧ್ಯಕ್ಷ ಎಂಬ ಅಂಶವನ್ನು ಮುಂದಿಟ್ಟುಕೊಂಡು ಯಾವುದೇ ತೀರ್ಮಾನವನ್ನು ಏಕಪಕ್ಷೀಯವಾಗಿ ಕೈಗೊಳ್ಳದಂತೆ ಬಿಗಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Previous Articleಪಶ್ಚಿಮಘಟ್ಟ ಉಳಿಸಲು ಸಚಿವ ಖಂಡ್ರೆ ಪ್ಲಾನ್.
Next Article ಸಂಕಷ್ಟಕ್ಕೆ ಸಿಲುಕಿದ ಸಿದ್ದರಾಮಯ್ಯ.