ಬೆಂಗಳೂರು,ಆ.18- ಲಗೇಜ್ ಬ್ಯಾಗ್ಗೆ ಚಿನ್ನದ ನಟ್ಸ್ ಬೋಲ್ಟ್ ಅಳವಡಿಸಿ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕನೊಬ್ಬ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ ಕಂಡು ಕೆಲಕಾಲ ದಂಗಾಗಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಿಗ್ಗೆ ದುಬೈನಿಂದ ಎಮಿರೇಟ್ಸ್ ವಿಮಾನ ಸಂಖ್ಯೆ 568ರಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಮಾಹಿತಿ ಬಂದಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆಯ ವಾಯು ಗುಪ್ತಚರ ಘಟಕವು ಪ್ರಯಾಣಿಕನನ್ನು ವಶಕ್ಕೆ ಪಡೆದು, ಆತನ ಲಗೇಜ್ ಬ್ಯಾಗ್ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಯಾಣಿಕನು ತನ್ನ ಲಗೇಜ್ ಬ್ಯಾಗ್ಗೆ ಚಿನ್ನದ ನಟ್ಸ್ ಬೋಲ್ಟ್ಗಳನ್ನು ಅಳವಡಿಸಿಕೊಂಡು ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಿಸಲು ಯತ್ನಿಸಿದ್ದನ್ನು ಕಂಡುಕೊಂಡ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು 267 ಗ್ರಾಂ ಚಿನ್ನ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.