ಬೆಂಗಳೂರು.
ಮೀರ್ ಸಾದಿಕ್ ಗಳು ಮತ್ತು ಕೆಲವು ನಂಬಿಕೆ ದ್ರೋಹಿಗಳು ತಮ್ಮ ವಿರುದ್ಧ ದೊಡ್ಡ ಸಂಚು ರೂಪಿಸಿದ್ದರು. ಈ ಸಂಚಿಗೆ ತಾವು ಬಲಿಯಾಗಬಾರದು ಎಂದು ಕೋರ್ಟ್ ಮೂಲಕ ತಡೆಯಾಜ್ಞೆ ತಂದುಕೊಳ್ಳಬೇಕಾಯಿತು ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪಕ್ಷ ಬಿಟ್ಟ ನಾವ್ಯಾರೂ ವ್ಯಭಿಚಾರ ಮಾಡಿಲ್ಲ. ಆದರೆ, ನಮಗೆ ಕೆಟ್ಟ ಹೆಸರು ತರಲು CD ಬಿಡುಗಡೆ ಮಾಡಿದರೆ, ಒಮ್ಮೆ ಹೋದ ಮಾನ ಮತ್ತೆ ಬರುವುದಿಲ್ಲ. ಇದರಿಂದ ರಕ್ಷಣೆ ಅಗತ್ಯವಾದ್ದರಿಂದ CD ಬಿಡುಗಡೆಗೆ ತಡೆಯಾಜ್ಞೆ ತರಲಾಗಿತ್ತು’ ಎಂದು ತಿಳಿಸಿದರು.
‘ಮೀರ್ ಸಾದಿಕ್ ರಂಥ ಜನ ನಮ್ಮ ಸುತ್ತಮುತ್ತಲೇ ಇರುತ್ತಾರೆ. ಇದೇ ಬಣಕಾರ್ ನಮ್ಮ ಜೊತೆಗೇ ಇದ್ದು, ಈಗ ಕಾಂಗ್ರೆಸ್ ಸೇರಿದ್ದಾರೆ. ರಮೇಶ್ ಜಾರಕಿಹೊಳಿಯವರ ಬಗ್ಗೆ ಅನವಶ್ಯಕವಾಗಿ ಸಿಡಿ ಬಿಡುಗಡೆ ಮಾಡಿದರು. ಆದರೆ ಏನಾಯ್ತು? B Report ಆಯ್ತು. ನಾವು ನಮ್ಮ ಗೌರವವನ್ನು ರಕ್ಷಿಸಿಕೊಳ್ಳುವ ಕೆಲಸ ಮಾಡಲೇಬೇಕು. Stay ಅವಧಿ ಹಿಂದೆಯೇ ಮುಗಿದಿದೆ. ನಂತರವಾದರೂ ಸಿಡಿ ಬಿಡುಗಡೆ ಮಾಡಬಹುದಿತ್ತಲ್ಲ’ ಎಂದರು.
‘ನಾವು 17 ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು. ಇದಕ್ಕಾಗಿ ಅವರು ನಮಗೆ ಅಭಿನಂದನೆ ತಿಳಿಸಬೇಕು’ ಎಂದು ಹೇಳಿದರು. ಯು.ಬಿ.ಬಣಕಾರ ಅವರ ಧಮ್, ತಾಕತ್ತನ್ನು ಮೂರು ಬಾರಿ ನೋಡಿ ಆಗಿದೆ. ನನಗೆ ಧಮ್ ಇರೋದಕ್ಕೆ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನಮಾನ ಬಂದಿತ್ತು. ಧಮ್, ತಾಕತ್ತಿನ ಮೇಲೆ ಚುನಾವಣೆ ನಡೆಯಲ್ಲ, ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ. ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಪುಸ್ತಕ ಬಿಡುಗಡೆ ಮಾಡಲಿ. ಆಗ ಒಪ್ಪಿಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು.