ಬೆಂಗಳೂರು, ಆ.21- ಇಂಡಿಗೋ ವಿಮಾನದಲ್ಲಿ ಗಗನಸಖಿಗೆ ಮೈ ಮುಟ್ಟಿ ನಿನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ ಎಂದು ಲೈಂಗಿಕ ಕಿರುಕುಳ ನೀಡಿದ ವಿದೇಶಿ ಪ್ರಜೆಯೊಬ್ಬನನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಕಳೆದ ಆ.18ರ ಸಂಜೆ ಮಾಲ್ಡೀವ್ಸ್ ನ ಮಾಲೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತನಗೆ ಸೇವೆ ಸಲ್ಲಿಸಲು ಬಂದ ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಮಾಲ್ಡೀವ್ಸ್ ಪ್ರಜೆ ಅಕ್ರಂ ಮೊಹಮದ್(51) ಬಂಧಿತ ಆರೋಪಿಯಾಗಿದ್ದಾನೆ.
ವಿಮಾನದಲ್ಲಿ ಪ್ರಯಾಣಿಸುವ ವೇಳೆ ಆರೋಪಿಯು ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಇತರ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.
ಈ ವಿಚಾರವನ್ನು ಗಗನಸಖಿಯರು ಪೈಲಟ್ ಗೆ ಮಾಹಿತಿ ನೀಡಿದ್ದು ಆತ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನ ಬಂದಿಳಿದ ಕೂಡಲೇ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 (ಯಾವುದೇ ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಮತ್ತು 409 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಲೆಯ ವೆಲಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಖ್ಯೆ 6ಇ 1128 ವಿಮಾನವು ಮಧ್ಯಾಹ್ನ 3.48 ಕ್ಕೆ ಟೇಕ್ ಆಫ್ ಆದ ನಂತರ ಈ ಘಟನೆ ಸಂಭವಿಸಿದೆ. ಸೀಟ್ ನಂಬರ್ 38ಡಿಯಲ್ಲಿ ಕುಳಿತಿದ್ದ ಆರೋಪಿ ಅಹ್ಮದ್, ಗಗನಸಖಿಯ ಬಳಿ ಒಂದು ಗ್ಲಾಸ್ ಬಿಯರ್ ಮತ್ತು ಗೋಡಂಬಿಯನ್ನು ಕೇಳಿದ್ದಾನೆ.
ಅದನ್ನು ನೀಡಲು ಹೋದ ಗಗನಸಖಿಯನ್ನು ಉದ್ದೇಶಿಸಿ ನಾನು ಕಳೆದ 51 ವರ್ಷಗಳಿಂದ ನಿಮ್ಮಂತಹ ಹುಡುಗಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿ ಸೇವೆಗೆ ನೀವು ಎಷ್ಟು ಶುಲ್ಕ ವಿಧಿಸುತ್ತೀರಿ ಮತ್ತು ನೀವು ಯಾವಾಗ ಫ್ರೀಯಾಗಿ ಸಿಗುತ್ತೀರಿ ಎಂದು ಅಸಭ್ಯವಾಗಿ ಪ್ರಶ್ನಿಸಿದ್ದಾನೆ. ಬಳಿಕ 100 ಡಾಲರ್ ಹಣ ನೀಡಿ ಬಿಲ್ ಮೊತ್ತ 10 ಡಾಲರ್ ನೊಂದಿಗೆ ಉಳಿದ 90 ಡಾಲರ್ ಹಣವನ್ನು ನೀವೇ ಇಟ್ಟುಕೊಳ್ಳಿ ಎಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ವಿಮಾನದಲ್ಲಿ ಆದ ಘಟನೆಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ದೃಢೀಕರಿಸಿದ್ದು, ಇನ್ನೊಬ್ಬ ವಿಮಾನದ ಪ್ರಯಾಣಿಕ ಆರ್ಡರ್ ಮಾಡಿದ್ದನ್ನು ಪಾವತಿಸಲು ಕೇಳಲು ಹೋದಾಗ, ಅಹ್ಮದ್ ಗಗನಸಖಿಯರ ಕೈಗಳನ್ನು ತನ್ನ ಜೇಬಿನೊಳಗೆ ಇರಿಸಿ ನಗದು ತೆಗೆದುಕೊಳ್ಳುವಂತೆ ಮತ್ತು ಅಶ್ಲೀಲ ಸನ್ನೆ ಮಾಡಿದರು ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.