ದಾವಣಗೆರೆ,ಜೂ.21- ಹರಪನಹಳ್ಳಿ ತಾಲೂಕಿನ ಹಲವಾಗಲು ಬಳಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ವಿವಾಹಿತೆ ಕೊಲೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಅನೈತಿಕ ಸಂಬಂಧ ಹೊಂದಿದ ಪ್ರಿಯಕರನಿಂದಲೇ ಕೊಲೆಯಾಗಿರುವುದನ್ನು
ಪತ್ತೆಹಚ್ಚಿದ್ದಾರೆ.
ಹರಪನಹಳ್ಳಿ ತಾಲೂಕಿನ ನಿಟ್ಟೂರಿನ ಕವಿತಾ ಕೊಲೆಯಾದವರು,ಪ್ರಿಯಕರ ಸಲೀಂ ಮುನ್ನಾ ಖಾನ್ ಕೊಲೆ ಆರೋಪಿಯಾಗಿದ್ದು ಆತನನ್ನು ಬಂಧಿಸಲಾಗಿದೆ.
ಮಹಿಳೆ ವಿವಾಹವಾಗಿದ್ದರೂ ಸಲೀಂ ಮುನ್ನಾ ಖಾನ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಆತನಿಂದಲೇ ಕೊಲೆಯಾಗಿದ್ದಾರೆ.
ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಶವವನ್ನು ಸುಟ್ಟು ಹಾಕಿದ್ದಾನೆ ಎಂದು ವಿಜಯನಗರ ಎಸ್ಪಿ ಶ್ರೀ ಹರಿಬಾಬು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಮೃತ ಕವಿತಾಳ ತವರು ಮನೆ ದಾವಣಗೆರೆ ತಾಲೂಕಿನ ಅಲೂರು ಗ್ರಾಮ. ತವರಿಗೆ ತೆರಳಿದ್ದ ಮಹಿಳೆ ಫೆ. 23 ರಂದು ಕಾಣೆಯಾಗಿದ್ದರು. ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಕವಿತಾ ತವರು ಮನೆಗೆ ಹೋಗಿರಲಿಲ್ಲ. ಅತ್ತ ಹರಪನಹಳ್ಳಿ ತಾಲೂಕಿನ ನಿಟ್ಟೂರಿನ ಪತಿಯ ಮನೆಗೂ ವಾಪಸ್ ಹೋಗದೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಹಲವಾಗಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕತ್ತು ಹಿಸುಕಿ ಹತ್ಯೆ:
ಹರಿಹರಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದ ಕವಿತಾ ಹರಿಹರಕ್ಕೆ ಹೋಗದೇ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮಕ್ಕೆ ತೆರಳಿದ್ದರಂತೆ. ಅಲ್ಲಿ ತನ್ನ ಪ್ರಿಯಕರ ಸಲೀಂನ್ನು ಭೇಟಿಯಾಗಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಕುಂಚೂರಿ ಕೆರೆಯ ಬಳಿ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕವಿತಾಳ ಫೋನ್ ಬ್ಯುಸಿ ಬರತ್ತಿದ್ದ ವಿಚಾರಕ್ಕೆ ಸಲೀಂ ಹಾಗೂ ಕವಿತಾಳ ನಡುವೆ ನಡೆದ ಜಗಳ ತಾರಕಕ್ಕೇರಿದೆ. ಫೋನ್ ಬ್ಯುಸಿ ಬರುತ್ತದೆ. ನೀನು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಿಯಾ? ಎಂದು ಸಲೀಂ ಕವಿತಾಳನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ವಾಗ್ವಾದ ನಡೆದು ಸಲೀಂ ಕವಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ .
ಶವ ಸುಟ್ಟ ದುರುಳ:
ಕೊಲೆ ಮಾಡಿರುವ ವಿಚಾರ ಯಾರಿಗೂ ತಿಳಿಬಾರದೆಂದು ಆರೋಪಿ ಸಲೀಂ ಪರಿಚಯಸ್ಥರ ಜಮೀನಿನಲ್ಲಿ ಕವಿತಾಳ ಮೃತದೇಹ ಸುಟ್ಟು ಹಾಕಿದ್ದಾನೆ. ಕೆಲ ದಿನಗಳ ಬಳಿಕ ಶವ ಸುಟ್ಟ ಘಟನೆಯನ್ನು ಸ್ನೇಹಿತರ ಬಳಿ ಹೇಳಿಕೊಂಡು ನನ್ನ ಕಾಪಾಡು ಎಂದು ಸ್ನೇಹಿತರಿಗೆ ಆರೋಪಿ ಸಲೀಂ ಅಂಗಾಲಾಚಿ ಬೇಡಿಕೊಂಡಿದ್ದಾನೆ. ಆದರೆ ಆತನ ಸ್ನೇಹಿತರು ತಡಮಾಡದೇ ಈ ಕೊಲೆ ವಿಚಾರವನ್ನು ಕವಿತಾಳ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ವಿಚಾರ ತಿಳಿದ ಬೆನ್ನಲ್ಲೇ ಆರೋಪಿ ಸಲೀಂನನ್ನು ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ ಹರಿಬಾಬು ಮಾಹಿತಿ ನೀಡಿದರು.
Previous ArticleKMF ಅಧ್ಯಕ್ಷ ಭೀಮಾನಾಯಕ್
Next Article ನೇಮಕಾತಿ ಪರೀಕ್ಷೆಯಿಂದ ಇವರೆಲ್ಲ ಶಾಶ್ವತವಾಗಿ ಡಿಬಾರ್