ಬೆಂಗಳೂರು, ನ.6: ಮಹಾ ನಗರಿ ಬೆಂಗಳೂರಿನ ಜನ ದಟ್ಟಣೆಯ ವಸತಿ ಪ್ರದೇಶಗಳಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಕ್ಷಿಪ್ರ ಚಿರತೆ (Leopard) ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಬಾರಿ ಮಳೆ ಅಭಾವ ಸೇರಿದಂತೆ ಹಲವಾರು ಕಾರಣಗಳಿಂದ ಚಿರತೆ ಸೇರಿದಂತೆ ಇತರೆ ವನ್ಯಜೀವಿಗಳು ನೀರು, ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬೆಂಗಳೂರು ನಗರದ ಹೊರವಲಯದಲ್ಲಿ ಕಾಡು ಮತ್ತು ಬೆಟ್ಟಗುಡ್ಡ ಇರುವ ಪ್ರದೇಶದಲ್ಲಿ ಇತ್ತೀಚೆಗೆ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಈ ವಿದ್ಯಮಾನ ಬೆಂಗಳೂರಿನ ಜನರಲ್ಲಿ ಆತಂಕ ಮೂಡಿದೆ.ಇದನ್ನು ನಿವಾರಿಸುವ ಜೊತೆಗೆ, ಚಿರತೆ ಹಾವಳಿ ತಡೆಯಲು ಕೂಡಲೇ ಬೆಂಗಳೂರಿನಲ್ಲಿ ಒಂದು ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಆದೇಶಿಸಿದ್ದಾರೆ.
ಈ ಮೂಲಕ ವನ್ಯಮೃಗಗಳು ನಾಡಿಗೆ ಬಂದರೆ ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ಹಾಲಿ ಇದ್ದ 5 ಆನೆ ಕ್ಷಿಪ್ರಕಾರ್ಯಪಡೆಗಳ ಜೊತೆಗೆ ಬೆಂಗಳೂರು (ಬನ್ನೇರುಘಟ್ಟ) ಮತ್ತು ರಾಮನಗರದಲ್ಲಿ ತಲಾ ಒಂದರಂತೆ 2 ಕಾರ್ಯಪಡೆಯನ್ನು ಹೆಚ್ಚುವರಿಯಾಗಿ ರಚಿಸಲಾಗಿದೆ. ಅದೇ ರೀತಿ ಹೆಚ್ಚು ಕಾಡಿರುವ ಮತ್ತು ಚಿರತೆಗಳು (Leopard), ಕರಡಿಗಳು ಇರುವ ಬೆಟ್ಟಗುಡ್ಡದ ಪ್ರದೇಶದಲ್ಲಿ ಕನಿಷ್ಠ 3 ಜಿಲ್ಲೆಗೆ ಒಂದರಂತೆ ಕ್ಷಿಪ್ರ ಕಾರ್ಯಪಡೆ ರಚಿಸಿ, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಸೂಚಿಸಿದ್ದಾರೆ.
ಚಿರತೆ ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸುವಂತೆ ಮತ್ತು ಅಣಕು ಕಾರ್ಯಾಚರಣೆಗಳನ್ನೂ ನಡೆಸಿ ಸಿಬ್ಬಂದಿಯನ್ನು ಸಜ್ಜುಗೊಳಿಸುವಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.