ಬೆಂಗಳೂರು, ಡಿ.20: ರಾಜ್ಯದಲ್ಲಿ ಸಾಂಕ್ರಾಮಿಕ ಕೋವಿಡ್ ಗೆ (COVID-19) ಒರ್ವ ವ್ಯಕ್ತಿ ಮೃತಪಟ್ಟಿದ್ದು,ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಈ ನಡುವೆ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ಬಸ್ಸುಗಳಲ್ಲಿ ಪ್ರಯಾಣಿಸುವವರು ಹಾಗೂ ದೇವಾಲಯಗಳಲ್ಲಿ ಮಾಸ್ಕ್ ಧರಿಸುವ ಮೂಲಕ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡ ಮನವಿ ಮಾಡಿದ್ದಾರೆ.
ಮತ್ತೊಂದೆಡೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಸಭೆಯಲ್ಲಿ ಕೇಂದ್ರದ ಆರೋಗ್ಯ ಸಚಿವರು ಕೇಂದ್ರದ ಉನ್ನತಾಧಿಕಾರಿಗಳು ಹಾಗೂ ಎಲ್ಲಾ ರಾಜ್ಯದ ಆರೋಗ್ಯ ಸಚಿವರು ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಅಂತರಾಷ್ಟ್ರೀಯ ರಾಷ್ಟ್ರದ ಪರಿಸ್ಥಿತಿ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು. ಇದರ ಜೊತೆಗೆ ಸಭೆಯಲ್ಲಿ ನಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ ಕೇಳಿದ್ದಾರೆ ಎಂದು ಈ ಸಭೆಯ ನಂತರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.
ಕೋವಿಡ್ಗೆ ಸಂಬಂಧಿಸಿದಂತೆ ನಾಳೆ ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು. ದೇಶಗಳಿಂದ ಬರುವವರಿಗೆ ಸದ್ಯಕ್ಕೆ ಸ್ಕ್ರೀನಿಂಗ್ ಇಲ್ಲ. ಕೇರಳದಿಂದ ಬರುವ ಅಯ್ಯಪ್ಪ ಭಕ್ತರಿಗೂ ಸ್ಕ್ರೀನಿಂಗ್ ಮಾಡಲು ಹೇಳಿಲ್ಲ. ಆದರೆ, ಕೋವಿಡ್ ಲಕ್ಷಣವಿದ್ದರೆ ಮಾತ್ರ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಕೇರಳ ಗಡಿಯ 4 ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಹೇಳಿದರು ಕಳೆದ ಬಾರಿ ಶೇ 90 ರಷ್ಟು ಜನರು ಹೋಂ ಕ್ವಾರಂಟೈನ್ನಲ್ಲಿ ಇದ್ದರು. ಟೆಸ್ಟಿಂಗ್ ಕಿಟ್, ಮಾಸ್ಕ್, ಔಷಧ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿ ಸಂಬಂಧ ನಾಳೆ ಚರ್ಚೆ ಆಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆರ್ಟಿ-ಪಿಸಿಆರ್ ಟೆಸ್ಟ್ ದರದ ಬಗ್ಗೆ ಚರ್ಚೆ ಮಾಡುತ್ತೇವೆ. ಸದ್ಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್ಟಿ-ಇಸಿಆರ್ ಟೆಸ್ಟ್ ಉಚಿತ ಇದೆ. ರಾಜ್ಯದಲ್ಲಿ ನಿತ್ಯ ಐದು ಸಾವಿರ ಟೆಸ್ಟಿಂಗ್ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಉಪ ತಳಿ ಜೆಎನ್.1 ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಮೂರು ತಿಂಗಳಿಂದ ಹೆಚ್ಚಾಗಿ ಕಾಣಿಸಿಕೊಂಡಿದೆ. ಆಗಸ್ಟ್ನಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಬಹಳ ವೇಗವಾಗಿ ಹರಡುವ ವೈರಾಣಾಗಿದ್ದರೂ, ಇದು ಹಾನಿಕಾರಕವಾಗಿಲ್ಲ. ಮೃತಪಡುವುದು ವಿರಳ. ಯಾವುದೇ ರೀತಿಯ ಭಯ, ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸುವುದು ಅಗತ್ಯ ಎಂದರು. ಕರ್ನಾಟಕದಲ್ಲಿ ಅತಿ ಹೆಚ್ಚು ಟೆಸ್ಟ್ ಮಾಡಲಾಗಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಂದು ಸಾವಿರ ಟೆಸ್ಟ್ 1,020 ಟೆಸ್ಟ್ ಆಗಿದೆ. ಪ್ರತಿದಿನ ಟೆಸ್ಟ್ ಹೆಚ್ಚು ಮಾಡಲು ಸೂಚಿಸಲಾಗಿದೆ. ಪ್ರತಿದಿನ 5 ಸಾವಿರ ಟೆಸ್ಟ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಮಾಸ್ಕ್ ಧರಿಸಿ:
ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಬಸ್ ಪ್ರಯಾಣಿಕರು ಹಾಗೂ ದೇವಾಲಯಗಳಿಗೆ ಭೇಟಿ ನೀಡುವ ಭಕ್ತ ಸಮೂಹಕ್ಕೆ ಮನವಿ ಮಾಡಿದರು.
ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಅದರಂತೆ ಯಾರು ಕೇರಳಕ್ಕೆ ಹೋಗಿ ಬರುತ್ತಿದ್ದಾರೋ ಅವರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಅಯ್ಯಪ್ಪಸ್ವಾಮಿ ಭಕ್ತರೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ದಾಟಿದವರು ಹಾಗೂ ಶೀತ, ಕೆಮ್ಮು, ಜ್ವರದ ಲಕ್ಷಣ ಇರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸೂಚಿಸಿದರು.
ಬಸ್ನಲ್ಲಿ ಜನ ಹೆಚ್ಚಿರಲಿದ್ದಾರೆ ಹಾಗಾಗಿ ರೋಗ ಲಕ್ಷಣ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು. ಅದೇ ರೀತಿ 60 ವರ್ಷ ದಾಟಿದ ಪ್ರಯಾಣಿಕರು ಬಸ್ ಪ್ರಯಾಣದ ವೇಳೆ ಮಾಸ್ಕ್ ಧರಿಸಬೇಕು. ದೇವಾಲಯದಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿರಲಿದೆ ಅಲ್ಲಿಯೂ ಕೂಡ 60 ವರ್ಷ ದಾಟಿದವರು ಕಡ್ಡಾಯ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಹೇಳಿದರು.
ಪ್ರವಾಸ ಬೇಡ:
ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಲಾ ಮಕ್ಕಳಿಗೆ ವಾರ್ಷಿಕ ಪ್ರವಾಸ ಅಥವಾ ಪಿಕ್ ನಿಕ್ ಗಳಿಗೆ ಕರೆದೊಯ್ಯದಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಮುಂದಿನ ಸೂಚನೆವರೆಗೆ ಈ ಪ್ರವಾಸ ಮುಂದೂಡಲು ಸಲಹೆ ಮಾಡಿದೆ.