ಹೈದರಾಬಾದ್,ಜೂ.13-ವೇಗವಾಗಿ ಹೋಗುತ್ತಿದ್ದ ಬಸ್ ಪಲ್ಟಿ ಹೊಡೆದು ಮೂವರು ಮಕ್ಕಳು ಸೇರಿ ಐವರು ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಐವರಲ್ಲಿ ಮೂವರನ್ನು ಧನೇಶ್ವರ್ ದಳಪತಿ, 24, ಜೀತು ಹರಿಜನ್, 5, ಮತ್ತು ಸುನೈನಾ ಹರಿಜನ್, 2 ಎಂದು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ತಕ್ಷಣವೇ ಪತ್ತೆಯಾಗಿಲ್ಲ.
60 ಮಂದಿ ಪ್ರಯಾಣಿಕರಿದ್ದ ಬಸ್ ಒಡಿಶಾದ ಚಿನ್ನಪಲ್ಲಿಯಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಹೋಗುತ್ತಿದ್ದಾಗ ಏಡುಗುರಲ್ಲಪಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಪರಿಣಾಮ ಬಸ್ ರಸ್ತೆಬದಿಗೆ ಉರುಳಿ ಬಿದ್ದಿದ್ದು, ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿಬ್ಬರು ಕೂಡ ಮೃತಪಟ್ಟಿದ್ದಾರೆ. ಪ್ರಾಥಮಿಕ ವಿಚಾರಣೆಯಿಂದ ಚಾಲಕ ಮದ್ಯದ ಸ್ಥಿತಿಯಲ್ಲಿದ್ದು, ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.