ಬೆಂಗಳೂರು,ಜೂ.9- ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದರಾಮಯ್ಯ ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲ ಕಾಲ ಕೆಲಸ ಮಾಡಲಿದ್ದಾರೆ.
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಟಿಕೆಟ್ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಅಧಿಕೃತಮೂಲಗಳ ಪ್ರಕಾರ ಜೂನ್ 11ರಂದು ಬೆಳಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಯೋಜನೆ ಚಾಲನೆ ನೀಡಲಾಗುತ್ತದೆ. ಅಂದು ಮೆಜೆಸ್ಟಿಕ್‍ಗೆ ಬಸ್‍ನಲ್ಲಿ ಆಗಮಿಸುವ ಸಿದ್ದರಾಮಯ್ಯ, ಅಲ್ಲಿಂದ ವಿಧಾನಸೌಧ ಮಾರ್ಗದಲ್ಲಿ ಸಂಚರಿಸುವ ರೂಟ್ ನಂಬರ್ 43ರ ಬಸ್‍ನಲ್ಲಿ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ನೀಡಲಿದ್ದಾರೆ. ಈ ಮೂಲಕ ಉಚಿತ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ನೀಡಿದ ಪ್ರಮುಖ ಭರವಸೆಗಳ ಪೈಕಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯೂ ಒಂದು ಯೋಜನೆ ಜಾರಿಗೊಳಿಸುವ ದಿನದಂದು ಸಿಹಿ ಹಂಚುವ ಮೂಲಕ ಹಬ್ಬದ ಮಾದರಿಯಲ್ಲಿ ಸಂಭ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಆದರೆ ಯೋಜನೆ ಅನುಷ್ಠಾನಗೊಳ್ಳುವ ದಿನದಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಇರುವುದಿಲ್ಲ ಈ ಹಿಂದೆಯೇ ನಿಗದಿಯಾಗಿರುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅವರು ಕುಟುಂಬ ಸದಸ್ಯರೊಂದಿಗೆ ಮಧ್ಯಪ್ರದೇಶದ ಉಜ್ಜಯನಿಗೆ ತೆರಳುತ್ತಿದ್ದಾರೆ