ಬೆಂಗಳೂರು – ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿ ಗುತ್ತಿಗೆಯಲ್ಲಿ 40ರಷ್ಟು ಕಮಿಷನ್ ಪ್ರಕರಣದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಾದ 40ರಷ್ಟು ಕಮಿಷನ್ ಆರೋಪ ಸಂಬಂಧ ತನಿಖಾ ಆಯೋಗ ರಚನೆಯಾಗಿದೆ.ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ವಿರುದ್ಧ ಮಾಡಿದ ಈ ಕಮೀಷನ್ ಆರೋಪ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಸರ್ಕಾರದ ವಿವಿಧ ಯೋಜನೆಗಳಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು (Revised Estimate), ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು.
ಇವುಗಳ ಬಗ್ಗೆ ವಿಚಾರಣೆ ನಡೆಸಲು ಆಯೋಗಕ್ಕೆ ಸೂಚಿಸಲಾಗಿದ್ದು,ಇದರ ಜೊತೆಗೆಯೋಜನೆ/ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ. ಅನುಷ್ಠಾನಗೊಳಿಸಲಾದ ಕಾಮಗಾರಿ/ ಯೋಜನೆಗಳ ಗುಣಮಟ್ಟ.
ಕಾಮಗಾರಿಗಳ ಅಂದಾಜುಗಳನ್ನು ನಿಯಮಗಳ ಪ್ರಚಲಿತ ಅನುಸೂಚಿ ದರಗಳ ಅನುಸಾರವಾಗಿ ತಯಾರಿಸಿರುವ ಬಗ್ಗೆ.
ಕಾಮಗಾರಿಗಳ ಅಂದಾಜಿನಲ್ಲಿನ ಪರಿಮಾಣ (Quantity) ವಾಸ್ತವಿಕವಾಗಿದೆಯೇ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ ಹೆಚ್ಚಿಸಿದ್ದಲ್ಲಿ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ ಎಂಬುದನ್ನು ಪರೀಕ್ಷಿಸಬೇಕು.
ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ (Variation) ಅನಿವಾರ್ಯತೆ ಮತ್ತು ಅಗತ್ಯತೆ: ಅನಿವಾರ್ಯವಾಗಿದ್ದಲ್ಲಿ, ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿರುವ ಬಗ್ಗೆ.
ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ಲು ಪಾವತಿ ಮಾಡಲಾಗಿದೆಯೇ ಅಥವಾ ಅನಷ್ಠಾನವಾದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್ಲು ಪಾವತಿಸಲಾಗಿದೆಯೇ?
ಕಾಮಗಾರಿಗಳ ಟೆಂಡರ್‌ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೇ ಎಂಬ ಅಂಶಗಳ ಬಗ್ಗೆ.
ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ?
ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪ-ದೋಷಗಳ ಬಗ್ಗೆ ವಿಚಾರಣೆ ನಡೆಸಲು ಸೂಚಿಸಲಾಗಿದೆ.