ಬೆಂಗಳೂರು, ಆ. 08 – ಸರ್ಕಾರದ ವಿವಿಧ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಬಾಕಿ ಬಿಡುಗಡೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಗುತ್ತಿಗೆದಾರರು ಬಹಿರಂಗವಾಗಿ ಆರೋಪಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಆದರೆ, ಡಿಸಿಎಂ ಶಿವಕುಮಾರ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ, ಇದಕ್ಕೆ ತಿರುಗೇಟು ನೀಡಿರುವ ಗುತ್ತಿಗೆದಾರರು ಶಿವಕುಮಾರ್ ಅವರು, ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರು ಸಂಘದ ಪದಾಧಿಕಾರಿಗಳು ನಿನ್ನೆ ಸುದ್ದಿಗೋಷ್ಠಿ ನಡೆಸಿ,ಬಿಲ್ ಬಾಕಿ ಬಿಡುಗಡೆಗೆ ಆಗ್ರಹಿಸಿದ್ದರು.
ಈ ವೇಳೆ ಗುತ್ತಿಗೆದಾರರ ಸಂಘದ ಸಭೆ ನಡೆಯುತ್ತಿತ್ತು ಇಲ್ಲಿ ಗುತ್ತಿಗೆದಾರ ಹೇಮಂತ್ ಎಂಬುವವರು ಮಾತನಾಡಿ, ಉಪ ಮುಖ್ಯಮಂತ್ರಿ ಅವರು ಬಾಕಿ ಬಿಲ್ ಪಾವತಿಗೆ ಹಣ ಕೇಳಿದ್ದಾರೆ. ಹಣ ಕೇಳಿಲ್ಲ ಎನ್ನುವುದಾದರೆ ಅವರು ನಂಬುವ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ. ಹಣ ಕೇಳಿದ್ದಾರೆ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದರು. ಇದು ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿರುವ ಗುತ್ತಿಗೆದಾರ ಮಾತನಾಡಿ, ನಾವು ನ್ಯಾಯಯುತವಾಗಿ ಕೆಲಸ ಮಾಡಿದ್ದೇವೆ. ಕಮಿಷನರ್ ಮೇಲೆ ಯಾಕೆ ಆರೋಪ ಮಾಡ್ತಿರಾ, ಇಷ್ಟು ದಿನ ಅವರೇ ಅಲ್ವಾ ಬಿಲ್ ಪಾವತಿ ಮಾಡ್ತಿರೋದು, ಈಗ ಯಾಕೆ ಅವರು ಬಿಲ್ ತಡೆಯುತ್ತಾರೆ, ಅವರಿಗೆ ಬಿಲ್ ತಡೆ ಹಿಡಿಯುವಂತೆ ಹೇಳಿರೋದು ಯಾರು ಅವರ ಬಗ್ಗೆ ಮಾತನಾಡಿ. ಈಗ ಸಮಿತಿ ಮಾಡಿದ್ದಾರೆ, ಬಿಲ್ ಸ್ಯಾಂಕ್ಷನ್ ಮಾಡಿಸಿಕೊಳ್ಳುತ್ತೀರಾ?, ನಾವೇನು ಕಳ್ಳತನ ಮಾಡಿಲ್ಲ, ಕೋರ್ಟ್ ಗೆ ಹೋಗೋಣ.
ನಾನು ಕೂಡ ಕಾಂಗ್ರೆಸ್ ಗೆ ಓಟ್ ಹಾಕಿದವನು, 94 ಕೋಟಿ ಬಿಲ್ ಬಾಕಿ ಬಿಲ್ ಬರಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಬೆದರಿಕೆಗೆ ಹೆದರೋಲ್ಲಾ:
ಈ ಎಲ್ಲಾ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್,ಸರಿಯಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಯಾವ ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಎಂದೂ ನನಗೆ ಗೊತ್ತಿದೆ,ಇಂತಹ ಆಣೆ,ಪ್ರಮಾಣದ ರಾಜಕಾರಣ ಸಾಕಷ್ಟು ನೋಡಿದ್ದೇನೆ ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಹೇಳಿದರು.
ನಾನು ಯಾವುದೇ ಗುತ್ತಿಗೆದಾರರಿಗೆ ಉತ್ತರ ಕೊಡಲು ಹೋಗುವುದಿಲ್ಲ. ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕೀಯ ಗೊತ್ತಿದೆ. ಗುತ್ತಿಗೆದಾರರೂ ಗೊತ್ತಿದ್ದಾರೆ. ಅವರ ಹಿಂದೆ ಯಾರಿದ್ದಾರೆ, ಯಾರು ಇದನ್ನು ಹೇಳಿಸುತ್ತಿದ್ದಾರೆ ಎಂದೂ ಗೊತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಈ ರೀತಿಯ ಬೆದರಿಕೆ, ಬ್ಲ್ಯಾಕ್‌ಮೇಲ್‌ಗೆ ಜಗ್ಗುವುದಿಲ್ಲ. ರಾಜ್ಯಪಾಲರಿಗೆ ಪತ್ರ ಕೊಡುವುದು, ರಾಷ್ಟ್ರಪತಿಗೆ ಪತ್ರ ಕೊಡುವುದು, ಪ್ರಧಾನಿಯವರನ್ನು ಭೇಟಿ ಆಗುವುದು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.
ಯಾವುದೇ ಒತ್ತಡ ಬರಲಿ, ಅದನ್ನು ತಡೆದುಕೊಳ್ಳುವ ಶಕ್ತಿ ನನಗಿದೆ. ಈ ಗುತ್ತಿಗೆದಾರರ ವಿಚಾರಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಗುತ್ತಿಗೆದಾರರು ನನ್ನ ಬಳಿ ಬಂದಿದ್ದರು, ಕೆಲಸ ಮಾಡಿದ್ದರೆ ನಿಮಗೆ ಹಣ ಸಿಗುತ್ತದೆ ಎಂದು ಅವರಿಗೆ ಹೇಳಿದೆ. ಬಿಲ್ ಕೊಡುವುದಕ್ಕೂ ಒಂದು ಪ್ರಕ್ರಿಯೆ ಇದೆ. ಎರಡು, ಮೂರು ವರ್ಷ ಕಾದಿಲ್ಲವೇ ಅವರು ಎಂದು ಪ್ರಶ್ನಿಸಿದರು.
ನಾನು ಯಾರಿಗೂ ಪ್ರಮಾಣ ಮಾಡಬೇಕಾಗಿಲ್ಲ. ಕಾನೂನು ಏನು ಹೇಳಿದೆಯೋ ಅದೇ ಉತ್ತರ. ಕೆಲಸ ಮಾಡಿದ್ದರೆ ಬಿಲ್ ಕೊಡುತ್ತೇವೆ, ಕೆಲಸ ಮಾಡಲಿಲ್ಲವೆಂದರೆ ಬಿಲ್ ಕೊಡುವುದಿಲ್ಲ. ಇವತ್ತು ಅರ್ಜಿ ಕೊಟ್ಟರು, ನಾಳೆ ಟೆಂಡರ್ ಆಯಿತು, ಒಂದು ತಿಂಗಳಲ್ಲಿ ₹ 1 ಸಾವಿರ ಕೋಟಿ ಕೆಲಸ ಮಾಡಲು ಆಗುತ್ತಾ ನೀವೇ ಹೇಳಿ. ಅಧಿಕಾರಿಗಳಿಗೆ ಹೇಳಿದ್ದೇವೆ, ಮೌಲ್ಯಮಾಪನ ಮಾಡಿ, ಕೆಲಸ ಆಗಿದ್ದರೆ ಬಿಲ್ ಮಾಡಿ ಎಂದು. ಅವರು ಆ ಕೆಲಸ ನೋಡಿಕೊಳ್ಳುತ್ತಾರೆ. ಸರ್ಕಾರ ಇರುವುದು ನೀತಿ ರೂಪಿಸಲು. ಹೀಗಾಗಿ ನಾವು ಬಿಲ್ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.
ಸಿ.ಎಂ.ಭೇಟಿ:
ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗುತ್ತಿಗೆದಾರರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇದ್ದು, ಚುನಾವಣೆ, ಹೊಸ ಸರ್ಕಾರ ರಚನೆ ಹೀಗೆ 8 ತಿಂಗಳಿನಿಂದ ಬಾಕಿ ಮೊತ್ತ ಬಿಡುಗಡೆ ಆಗಿರುವದಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಬಾಕಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದರು.
Latest Kannada News – ALSO READ
ತುರ್ತು ಕಾಮಗಾರಿಗೆ ಮಾತ್ರ ಹಣ – ಸಿ.ಎಂ.ಸಿದ್ದರಾಮಯ್ಯ ಭರವಸೆ | Siddaramiah