ಚಿಕ್ಕಮಗಳೂರು, ಡಿ.1- ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಸಿಟಿ ರವಿ (CT Ravi) ಅವರ ಅಪ್ತ ಹಾಗೂ ಬಿಜೆಪಿ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ದುರ್ಗೇಶ್ ಅವರ ಮನೆಗೆ ಮಂಕಿ ಕ್ಯಾಪ್ ಧರಿಸಿದ ಆಗಂತುಕನೊಬ್ಬ ಮಾರಕಾಸ್ತ್ರದೊಂದಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾನೆ.
ಆಗಂತುಕನ ದಾಳಿಯಿಂದ ಗಾಯಗೊಂಡಿರುವ ದುರ್ಗೇಶ್ ಅವರು ಅದೃಷ್ಟವಶಾತ್ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಕಳೆದ ರಾತ್ರಿ ನಾಗರಹಳ್ಳಿ ಗ್ರಾಮದಲ್ಲಿನ ದುರ್ಗೇಶ್ ಅವರ ಮನೆಗೆ ನುಗ್ಗಿದ ಕಿರಾತಕ ಮನಬಂದಂತೆ ಥಳಿಸಿದ್ದಾನೆ.ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಅನಾಮಿಕ ಏಕಾಏಕಿ ದುರ್ಗೇಶ್ ಮೇಲೆ ಎರಗಿದ್ದಾನೆ. ಬಳಿಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೊಲೆ ಮಾಡಲೆಂದು ಹಂತಕ ಬಂದಿದ್ದ ಆದರೆ ದುರ್ಗೇಶ್ ಇದೇ ವೇಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ದುರ್ಗೇಶ್ ತಲೆಗೆ ಗಂಭೀರ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏತಕ್ಕಾಗಿ ಹಲ್ಲೆ ನಡೆದಿದೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಜಕೀಯ ದ್ವೇಷಕ್ಕೆ ಹೀಗೆ ಮಾಡಿರಬೇಕೆಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಸಿ.ಟಿ.ರವಿ ಭೇಟಿ ನೀಡಿದರು. ಗಾಯಾಳು ದುರ್ಗೇಶ್‌ರ ಆರೋಗ್ಯ ವಿಚಾರಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿಯಾಗಿ ದುರ್ಗೇಶ್ ಕೆಲಸ ಮಾಡುತ್ತಿದ್ದರು. ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ಪೊಲೀಸರು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ. ಕೊಲೆ ಯತ್ನ ಕೇಸ್ ದಾಖಲಾಗಿದ್ದು, ಹಲ್ಲೆ ಮಾಡಿದವರಿಗಾಗಿ ಹುಡುಕಾಟ ನಡೆದಿದೆ.