ದೇಶದ ರಾಜಕೀಯ ಚರಿತ್ರೆಯಲ್ಲಿ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಹೆಬ್ಬಾಗಿಲು ತೆರೆದ ಕೀರ್ತಿಗೆ ಪಾತ್ರವಾಗಿದ್ದು ಮಂಗಳೂರು ಲೋಕಸಭಾ ಕ್ಷೇತ್ರ.
ಕರ್ನಾಟಕದ ಬಿಜೆಪಿಯ ಪಾಲಿಗಂತೂ ಅತ್ಯಂತ ಭದ್ರ ಲೋಕಸಭೆ ಕ್ಷೇತ್ರವೆಂದರೆ ಅದು ದಕ್ಷಿಣ ಕನ್ನಡ. ಹಿಂದೆ ಮಂಗಳೂರು ಆಗಿದ್ದಾಗಲೂ, ಈಗ ದಕ್ಷಿಣ ಕನ್ನಡ ಆಗಿರುವಾಗಲೂ ಬಿಜೆಪಿ ಇಲ್ಲಿ ಸತತ ಗೆಲುವಿನ ನಗೆ ಬೀರುತ್ತಾ ಬಂದಿದೆ.
ಕಳೆದ 32 ವರ್ಷಗಳಿಂದ ಕ್ಷೇತ್ರವನ್ನು ಗೆಲ್ಲಲಾಗದೇ ಪರಿತಪಿಸುತ್ತಿರುವ ಕಾಂಗ್ರೆಸ್ ಹಲವಾರು ಪ್ರಯೋಗಗಳನ್ನು ಮಾಡಿದರೂ ಯಶಸ್ವಿಯಾಗಿಲ್ಲ. ಮೃದು ಹಿಂದುತ್ವ ಧೋರಣೆಯ ಅಭ್ಯರ್ಥಿಗೆ ಮಣೆ ಹಾಕುವ ಮೂಲಕ ಈ ಬಾರಿಯಾದರೂ ಗೆಲ್ಲಬೇಕು ಎಂಬ ಹಠಕ್ಕೆ ಬಿದ್ದಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕಡಲತಡಿಯ ನಗರಿ ಎಂದು ಕರೆಯಲ್ಪಡುವ ಮಂಗಳೂರು ಬಹಳ ವಿಶೇಷತೆಯಿಂದ ಕೂಡಿದೆ. ರಸ್ತೆ ಸಾರಿಗೆ, ವಾಯು ಸಾರಿಗೆ, ಜಲ ಸಾರಿಗೆ, ರೈಲು ಸಾರಿಗೆ ಇರುವ ರಾಜ್ಯದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಪ್ರವಾಸೋದ್ಯಮ, ಕೃಷಿ, ಮೀನುಗಾರಿಕೆ, ಧಾರ್ಮಿಕ ಹಿನ್ನೆಲೆ, ಕಡಲತೀರದ ವೈಶಿಷ್ಟ್ಯಗಳ ಮೂಲಕ ದೇಶ, ವಿದೇಶಗಳ ಗಮನ ಸೆಳೆಯುತ್ತಿರುವ ನಾಡು ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಈ ಹಿಂದೆ ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ನೆರೆಯ ಕೊಡಗು ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯ ಕ್ಷೇತ್ರಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ವಿಧಾನಸಭೆ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು.ಹೀಗಾಗಿ ಈ ಕ್ಷೇತ್ರ ಹಲವು ಭೌಗೋಳಿಕ ಕ್ಷೇತ್ರಗಳ ಸಮ್ಮಿಲನವಾಗಿತ್ತಿ.
2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ ಈ ಎಲ್ಲವೂ ಬದಲಾವಣೆಯಾದವು. ಇದೀಗ ದಕ್ಷಿಣ ಕನ್ನಡದ ಎಲ್ಲಾ ಭೂಭಾಗಗಳನ್ನು ಒಳಗೊಂಡ ವಿಧಾನಸಭೆಯ ಎಲ್ಲಾ ಕ್ಷೇತ್ರಗಳು ಸೇರ್ಪಡೆಗೊಂಡ ಪೂರ್ಣ ಜಿಲ್ಲೆಗೆ ಒಂದು ಕ್ಷೇತ್ರವಾಗಿದೆ.
1957ರಿಂದ 1989ರವರೆಗೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗತ್ತು. 1977ರಿಂದ 1989ರವರೆಗೆ ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಜನಾರ್ಧನ ಪೂಜಾರಿ ಅವರು ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು.
ದೇಶದಲ್ಲಿ ಯಾವಾಗ ರಾಮಮಂದಿರ ಆಂದೋಲನ ಆರಂಭವಾಯಿತೋ ಅಂದಿನಿಂದ ಕ್ಷೇತ್ರದ ಚಿತ್ತಣ ಬದಲಾವಣೆಯಾಯಿತು.ಸಂಘ ಪರಿವಾರ ಬಿಜೆಪಿಯ ಬೇರುಗಳನ್ನು ಅತ್ಯಂತ ಆಳವಾಗಿ ಇಳಿಯುವಂತೆ ಮಾಡಲು ಯಶಸ್ವಿಯಾಯಿತು.ಇದರ ಪರಿಣಾಮವಾಗಿ ಅಂದು ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರಿಗೆ 1991ರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಸಿದರು.
ಸಂಘ ಪರಿವಾರದ ಪ್ರಯೋಗಶಾಲೆಯ ಶೋಧ ಯುವ ವಕೀಲ ವಿ. ಧನಂಜಯ ಕುಮಾರ್. ಇಲ್ಲಿ ಮೊದಲ ಬಾರಿಗೆ ಕಮಲದ ಬಾವುಟ ಹಾರಿಸಿದರು.
ಬಾಬ್ರಿ ಮಸೀದಿ ಧ್ವಂಸಕ್ಕೂ ಮೊದಲು ನಡೆದ ಈ ಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ ಕರ್ನಾಟಕದ ಹಿಂದುತ್ವದ ಪ್ರಯೋಗಶಾಲೆ ಎಂದೇ
ಗುರುತಿಸಲ್ಪಡುವಂತಾಯಿತು.
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಕಮಲ ಪಾಳಯ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಹೀಗೆ ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಸತತ 8 ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ.
ಪ್ರತಿ ಚುನಾವಣೆಯಲ್ಲಿ ಸಂಘ ಪರಿವಾರ ವಿಭಿನ್ನ ಪ್ರಯೋಗ ಮಾಡುತ್ತಿದೆ.ಇದರ ಪರಿಣಾಮ ಕ್ಷೇತ್ರದ
ಅಭ್ಯರ್ಥಿಗಳು ಬದಲಾದರೂ ಬಿಜೆಪಿಯ ಗೆಲುವಿನ ನಾಗಾಲೋಟದಲ್ಲಿ ಯಾವುದೇ ಬದಲಾವಣೆ ಆಗದೇ ಇರುವುದು ಇಲ್ಲಿನ ವಿಶೇಷ.
ಸತತ ನಾಲ್ಕು ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ನ ಜನಾರ್ಧನ ಪೂಜಾರಿ ಅವರಿಗೆ ಸೋಲಿನ ರುಚಿ ತೋರಿಸಿದ ಧನಂಜಯ ಕುಮಾರ್ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಇವರ ಮುಂದೆ ಪೂಜಾರಿ ಅವರು ಯಶಸ್ಸು ಸಾಗಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ 1999ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರನ್ನು ಕಣಕ್ಕಿಳಿಸಿತು.ಆದರೆ ಕಾಂಗ್ರೆಸ್ ನ ಈ ಪ್ರಯೋಗ ಬಿಜೆಪಿ ಪ್ರಯೋಗಶಾಲೆಯ ಮುಂದೆ ಯಶಸ್ವಿಯಾಗಲಿಲ್ಲ.
ಮತ್ತೆ ಆಯ್ಕೆಯಾದ ಧನಂಜಯ ಕುಮಾರ್ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರೂ ಆದರು.ಇದಾದ ಬಳಿಕ ಸಂಘ ಪರಿವಾರದ ಪ್ರಯೋಗ ಶಾಲೆ ಧನಂಜಯ ಕುಮಾರ್ ಅವರಿಗೆ ವಿಶ್ರಾಂತಿ ನೀಡಿ 2004ರ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಡಿವಿ ಸದಾನಂದ ಗೌಡರನ್ನು ಕಣಕ್ಕಿಳಿಸಿತು.ಇವರ ವಿರುದ್ಧ ಮತ್ತೆ ವೀರಪ್ಪ ಮೋಯ್ಲಿ ಕಣಕ್ಕಿಳಿದರೂ ಬಿಜೆಪಿಯ ಗೆಲುವಿನ ಯಾತ್ರೆಗೆ ಕಡಿವಾಣ ಹಾಕಲಾಗಲಿಲ್ಲ.
2009ರ ಲೋಕಸಭಾ ಚುನಾವಣೆಗೆ ಬಿಜೆಪಿ ಸದಾನಂದ ಗೌಡ ಅವರನ್ನು ದಕ್ಷಿಣ ಕನ್ನಡದ ಪಕ್ಕದ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ವರ್ಗಾವಣೆ ಮಾಡಿ ಕ್ಷೇತ್ರಕ್ಕೆ ನಳಿನ್ ಕುಮಾರ್ ಕಟೀಲ್ ಅವರನ್ನು ಪರಿಚಯಿಸಿತು.
ಇದು ಕ್ಷೇತ್ರ ಪುನರ್ ವಿಂಗಡಣೆ ಆದ ಬಳಿಕದ ಮೊದಲ ಚುನಾವಣೆಯಾಗಿತ್ತು. ಈ ಬಾರಿ ಮತ್ತೆ ಸ್ಪರ್ಧಿಸಿದ್ದ ಜನಾರ್ದನ ಪೂಜಾರಿ ವಿರುದ್ಧ ನಳಿನ್ ಕುಮಾರ್ ಕಟೀಲ್ ನಿರಾಯಾಸವಾಗಿ ಗೆಲುವು ಸಾಧಿಸಿದರು. 2014ರಲ್ಲಿಯೂ ಅವರು ಪೂಜಾರಿಗೆ ಸೋಲುಣಿಸಿದರು.
ಇದಾದ ನಂತರ ಕಾಂಗ್ರೆಸ್ ಇಲ್ಲಿ ತನ್ನ ಕಾರ್ಯಶೈಲಿ ಬದಲಾವಣೆ ಮಾಡಿ ಬಿಜೆಪಿಯ ಹಿಂದುತ್ವ ಮಣಿಸಬೇಕಾದರೆ, ಮೃದು ಹಿಂದುತ್ವ ಧೋರಣೆ ಅನುಸರಿಸಬೇಕೆಂದು 2019ರಲ್ಲಿ ಮಿಥುನ್ ರೈ ಎಂಬ ಯುವಕನನ್ನು ಕಣಕ್ಕಿಳಿಸಿತಾದರೂ ಕಟೀಲ್ ಮತ್ತೆ ಗೆಲುವು ದಾಖಲಿಸಿ ಹ್ಯಾಟ್ರಿಕ್ ಗೆಲುವಿನ ಸರದಾರ ಎನಿಸಿಕೊಂಡರು.
ನಂತರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ ಕಟೀಲ್ ನಾಲ್ಕನೇ ಬಾರಿಗೆ ಲೋಕಸಭೆ ಪ್ರವೇಶಿಸಲು ಮಾಡಿದ ಯತ್ನ ವಿಫಲವಾಯಿತು. ಸಂಘ ಪರಿವಾರದ ಸಲಹೆಯ ಮೇರೆಗೆ ನಳಿನ್ ಕುಮಾರ್ ಕಟೀಲ್ ಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಿ, ಹೊಸಮುಖವಾದ ಕ್ಯಾಪ್ಟನ್ ಬೃಜೇಶ್ ಚೌಟ ಅವರನ್ನು ಸ್ಪರ್ಧೆಗಿಳಿಸಿದೆ.
ಮತ್ತೆ ಕಾಂಗ್ರೆಸ್ ಇಲ್ಲಿ ಮೃದು ಹಿಂದುತ್ವ ಧೋರಣೆಗೆ ಮಣೆ ಹಾಕಿದೆ.ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಟ್ರಸ್ಟ್ ಖಜಾಂಚಿ ನ್ಯಾಯವಾದಿ,
ಬಿಲ್ಲವ ಸಮುದಾಯದ ಪ್ರಭಾವಿ ನಾಯಕ ಆರ್.ಪದ್ಮರಾಜ್ ಪೂಜಾರಿ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.
ವಿಶೇಷವೆಂದರೆ ಒಂದು ಕಾಲದಲ್ಲಿ ಜನತಾಪರಿವಾರ ಸಾಕಷ್ಟು ಪ್ರಭಾವ ಹೊಂದಿದ್ದ ಜಿಲ್ಲೆಯಲ್ಲಿ ಇದೀಗ ಜೆಡಿಎಸ್ ಯಾವುದೇ ಪ್ರಭಾವ ಹೊಂದಿಲ್ಲ.ಇದರ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ- 18,97,417 ಇದೆ. ಇದರಲ್ಲಿ ಪುರುಷರು- 9,30,567 ಇದ್ದರೆ, ಮಹಿಳೆಯರು- 9,66,850 ಇದ್ದಾರೆ.
ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಪುತ್ತೂರು ; ಅಶೋಕ್ ರೈ ಮತ್ತು ಉಳ್ಳಾಲದಲ್ಲಿ ಯು. ಟಿ ಖಾದರ್ ಮಾತ್ರ ಕಾಂಗ್ರೆಸ್ ಶಾಸಕರು. ಉಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.
ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ ಎಂದು ಕಂಡುಬರುತ್ತದೆ.ಕ್ಷೇತ್ರಹಿಂದುತ್ವದ ಭದ್ರ ಕೋಟೆಯಾಗಿದೆ. ಪ್ರಧಾನಿ ಮೋದಿ ಮೇಲಿರುವ ಪರವಾದ ಅಭಿಮಾನ ಎಲ್ಲೆಡೆ ಎದ್ದು ಕಾಣುತ್ತದೆ ಅಯೋಧ್ಯೆಯ ರಾಮ ಮಂದಿರ ನನಸಾಗಿದ್ದು, ಹಿಂದುತ್ವ ಪರವಾದ ಮತದಾರರಲ್ಲಿ ಸಂಭ್ರಮಕ್ಕೆ ಕಾರಣವಾದರೆ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಶ್ರಮ ಎದ್ದುಕಾಣುತ್ತದೆ.ಇದರಿಂದಾಗಿ ಬಿಜೆಪಿ,ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ, ರಾಮಮಂದಿರ ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆಯುವ ಹುಮ್ಮಸ್ಸಿನಲ್ಲಿದೆ.
ಆದರೆ, ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಹಿಂದು ಮುಖಂಡರಾದ ಸತ್ಯಜಿತ್ ಸುರತ್ಕಲ್ ಮತ್ತು ಅರುಣ್ ಕುಮಾರ್ ಪುತ್ತಿಲ ಅವರೂ ಬಿಜೆಪಿಯಿಂದ ದೂರ ಉಳಿದಿದ್ದಾರೆ.ಸತ್ಯಜಿತ್ ಸುರತ್ಕಲ್ ಅವರಂತೂ ಸಮುದಾಯದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು,ಬಿಲ್ಲವರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ ಈ ಅಂಶ ಕ್ಯಾಪ್ಟನ್ ಬೃಜೇಶ್ ಚೌಟ ಅವರಿಗೆ ದೊಡ್ಡ ತಲೆ ನೋವು ತಂದೊಡ್ಡಿದೆ ಇದರಿಂದಾಗಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳದೆ, ಬಿಜೆಪಿಯ ಒಳಬೇಗುದಿಯ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ. ಅಲ್ಲದೆ ರಾಜ್ಯ ಸರಕಾರದ ಸಾಧನೆ, ಗ್ಯಾರಂಟಿಗಳು ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕವಾಗಿರುವ ಗ್ಯಾರಂಟಿ ಫಲಾನುಭವಿಗಳ ಬಳಿ ಮತ ಕೇಳುವ ಮೂಲಕ ಕಾಂಗ್ರೆಸ್ ಮತ್ತೆ ಗತಕಾಲದ ವೈಭವವನ್ನು ಮರುಕಳಿಸುವುದಾಗಿ ಹೇಳುತ್ತಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಸಮುದಾಯವಾರು ಮತಗಳನ್ನು ನೋಡುವುದಾದರೆ ಬಿಲ್ಲವರು-3.60 ಲಕ್ಷ ಅಲ್ಪಸಂಖ್ಯಾತರುಬ-4.50 ಲಕ್ಷ, ಎಸ್ಸಿ,-ಎಸ್ ಟಿ- 2.80 ಲಕ್ಷ,ಒಕ್ಕಲಿಗ -2 ಲಕ್ಷ, ಬಂಟರು-1.25 ಲಕ್ಷ
ಬ್ರಾಹ್ಮಣ -1 ಲಕ್ಷ,ಕೊಂಕಣಿ 1 ಲಕ್ಷ ಹಾಗೂ ಇತರೆ ಸಮುದಾಯದ ಮತದಾರರು ಸುಮಾರು -3.50 ಲಕ್ಷ ಇದ್ದಾರೆ. ಹೀಗಾಗಿ ಮತದಾನ ಪ್ರಕ್ರಿಯೆ ಕುತೂಹಲ ಮೂಡಿಸಿದ್ದು,ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ.