ಬೆಂಗಳೂರು, ಫೆ.22- ಏಷ್ಯಾದ ಸಿಲಿಕಾನ್ ಕಣಿವೆ ಎಂದೇ ಪ್ರಖ್ಯಾತಿ ಪಡೆದಿರುವ ಉದ್ಯಾನ ನಗರಿ ಬೆಂಗಳೂರು ತಂತ್ರಜ್ಞಾನದ ರಾಜಧಾನಿ ಆದರೆ ಇಲ್ಲಿ ಮೊಬೈಲ್ ನೆಟ್ವರ್ಕ್ ಗಾಗಿ (Mobile Network) ಪರಿತಪಿಸುವ ಕೆಲವೊಂದು ಪ್ರದೇಶಗಳಿವೆ. ಭೌಗೋಳಿಕ ಕಾರಣ ಸೇರಿ ದಂತೆ ಕೆಲವೊಂದು ಕಾರಣಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಲಭಿಸುವುದಿಲ್ಲ.
ಆದರೆ ಇಲ್ಲಿ ಕೈದಿಗಳ ಕಾರಣಕ್ಕಾಗಿ ನೆಟ್ವರ್ಕ್ ಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದೂ
ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳು ಅಕ್ರಮವಾಗಿ ಮೊಬೈಲ್ ಬಳಸಬಾರದು ಎನ್ನುವ ಕಾರಣದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಳವಡಿಸಿರುವ ಜಾಮರ್ ಇಡೀ ಪ್ರದೇಶದ ಜನರಿಗೆ ಸಂಕಷ್ಟ ತಂದಿಟ್ಟಿದೆ.
ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹಾಕಿದ ಜಾಮರ್‌ನಿಂದಾಗಿ ಜೈಲಿನ ಸುತ್ತಮುತ್ತಲಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನೆಟ್‌ವರ್ಕ್ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯರಿಗೆ ಸಂಕಷ್ಟ ಉಂಟಾಗಿದೆ.
ಸ್ಥಳೀಯರು ಎಮರ್ಜೆನ್ಸಿ ಕಾಲ್ ಮಾಡಬೇಕಾದರೂ ನೆಟ್‌ವರ್ಕ್ ಹುಡುಕುತ್ತಾ ಅರ್ಧ ಕಿ.ಮೀ ದೂರ ಸಾಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ನೆಟ್ ವರ್ಕ್ ಸಮಸ್ಯೆ ತಪ್ಪಿದ್ದಲ್ಲ. ಆನ್ ಲೈನ್ ಕ್ಲಾಸ್ ಇದ್ದರೆ ವಿದ್ಯಾರ್ಥಿಗಳು ಸ್ನೇಹಿತರು, ಸಂಬಂಧಿಕರ ಮನೆಗೆ ಅಲೆದಾಡುತ್ತಿದ್ದಾರೆ.
ಸ್ಥಳೀಯ ನಿವಾಸಿಗಳ ಜೊತೆ ಪರಪ್ಪನ ಅಗ್ರಹಾರ ಪೊಲೀಸರಿಗೂ ಜಾಮರ್ ಸಮಸ್ಯೆ ಉಂಟಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ನೆಟ್ ವರ್ಕ್ ಸಮಸ್ಯೆ ಇದೆ. ಹೀಗಾಗಿ ಮೊಬೈಲ್ ಪೋನ್ ವರ್ಕ್ ಆಗದೆ ಸ್ಥಿರ ದೂರವಾಣಿ ಬಳಕೆ ಮಾಡುತ್ತಿದ್ದಾರೆ.
ಜೈಲು ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪರಿಣಾಮವಾಗಿಲ್ಲ. ಜೈಲಿನಲ್ಲಿ ಪ್ರಭಾವಿ ಖೈದಿಗಳು ಮೊಬೈಲ್ ಅಕ್ರಮವಾಗಿ ಬಳಸಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಜಾಮರ್ ಅಳವಡಿಕೆ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳುತ್ತಾರೆ. ಆದರೆ ಸಮಸ್ಯೆ ಅನುಭವಿಸುತ್ತಿರುವುದು ಮಾತ್ರ ಸ್ಥಳೀಯ ನಿವಾಸಿಗಳು. ಕಳೆದ ಒಂದು ವರ್ಷದಿಂದ ಮೊಬೈಲ್ ಜಾಮರ್ ಸಮಸ್ಯೆ ಇದೆ. ಮೊಬೈಲ್ ಜಾಮರ್ ಅನ್ನು ಜೈಲು ಆವರಣಕ್ಕೆ ಸೀಮಿತಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.