ಬೆಂಗಳೂರು, ಅ.28- ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರೊಂದಿಗೆ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಭೋಜನ ಕೂಟ ನಡೆಸಿದ್ದು,ರಾಜ್ಯ ರಾಜಕಾರಣದಲ್ಲಿ ಹೊಸ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಪರಮೇಶ್ವರ್ ಅವರ ನಿವಾಸದ ಸನಿಹದಲ್ಲೇ ಮನೆ ಇರುವ ಉಪ ಮುಖ್ಯಮಂತ್ರಿ ಶಿವಕುಮಾರ್ ತಮ್ಮ ಮನೆಯಲ್ಲೇ ಇದ್ದರೂ ಈ ಔತಣಕೂಟಕ್ಕೆ ಅವರನ್ನು ಆಹ್ವಾನಿಸಿಲ್ಲದಿರುವುದು ನಾನಾ ರೀತಿಯ ಚರ್ಚೆಗಳಿಗೆ ಅವಕಾಶ ನೀಡಿದೆ.
ಈ ಔತಣ ಕೂಟದಲ್ಲಿ ನಿಗಮ ಮಂಡಳಿ ನೇಮಕಾತಿ, ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ, ಬೆಳಗಾವಿ ಜಿಲ್ಲಾ ರಾಜಕಾರಣ, ಅಧಿಕಾರ ಹಂಚಿಕೆಯ ಸೂತ್ರ, ಮುಖ್ಯಮಂತ್ರಿ, ಸಚಿವರು ಹಾಗೂ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಶಾಸಕರು ನೀಡುತ್ತಿರುವ ಹೇಳಿಕೆಗಳು, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಅನುಸರಿಸಬೇಕಾದ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿವೆ ಎನ್ನಲಾಗಿದೆ.
ಸಭೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪದ ಬಗ್ಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ತಾವು 24 ಮಂದಿ ಶಾಸಕರೊಂದಿಗೆ ವಿದೇಶಿ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಯೋಜನೆ ರೂಪಿಸಿದ್ದೇನೆ ಎಂದು ತಿಳಿಸಿದ್ದು,ಸದ್ಯಕ್ಕೆ ಪ್ರವಾಸ ಕೈಬಿಡುವಂತೆ ಸಿಎಂ ಸಲಹೆ ಮಾಡಿದರು ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಅವರ ಆಪ್ತ ಕೆಲ ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿದ್ದಂತೆ ಸಕ್ರಿಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭವಿ ದಲಿತ ನಾಯಕ ಪರಮೇಶ್ವರ್ ಮನೆಯಲ್ಲಿ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹಲವು ಬಾರಿ ಹೇಳಿರುವ ಪರಮೇಶ್ವರ್ 2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡು ಕೂದಲೆಳೆಯ ಅಂತರದಲ್ಲಿ ಅವಕಾಶ ಕಳೆದುಕೊಂಡಿದ್ದರು.ಇದೀಗ ಬದಲಾದ ಲೆಕ್ಕಾಚಾರದಲ್ಲಿ ಅವರು ಮತ್ತೊಮ್ಮೆ ತಮ್ಮ ಉಮೇದುವಾರಿಕೆ ಮಂಡಿಸುತ್ತಿದ್ದಾರೆ.
ಇನ್ನು ಈ ಸಭೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ,
ರಾಜಕಾರಣಿಗಳು ಸಭೆ ಸೇರಿದ್ದಾಗ ರಾಜಕಾರಣ ಚರ್ಚೆಯಾಗದೆ ಇರುತ್ತದೆಯೇ. ಆದರೆ ಸದ್ಯಕ್ಕೆ ಗಂಭೀರವಾಗಿ ತೆಗೆದುಕೊಳ್ಳುವಂತಹದ್ದೇನು ಇಲ್ಲ. ಯಾವುದೇ ಸಮಸ್ಯೆಗಳಿದ್ದರೂ ನಮ್ಮಲ್ಲೆ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಐದು ವರ್ಷ ಸಿದ್ದರಾಮಯ್ಯ;
ಇದರ ನಡುವೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಗೃಹ ಮಂತ್ರಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಎಂದು ಹೇಳುವವರಿಗೆ ಬುದ್ದಿ ಇಲ್ಲ.ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೇಳಿದ್ದಾರೆ.
ನಿನ್ನೆ ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ನಾವು ಒಂದಿಷ್ಟು ಮಂದಿ ಊಟಕ್ಕೆ ಕರೆದಿದ್ದೇವು. ಅದರಲ್ಲಿ ವಿಶೇಷವೇನಿಲ್ಲ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು. ಡಿ.ಕೆ.ಶಿವಕುಮಾರ್ ಅವರನ್ನು ಭೋಜನಕೂಟಕ್ಕೆ ಆಹ್ವಾನ ನೀಡಿದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.
ಭೋಜನಕೂಟದಲ್ಲಿ ಯಾವುದೇ ರಾಜಕೀಯ ಚರ್ಚೆ ಇಲ್ಲ ಎಂದು ಪದೇ ಪದೇ ಪುನರುಚ್ಚರಿಸಿದ ಅವರು, ಪರಮೇಶ್ವರ್‍ರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಹೇಳುವವರಿಗೆ ಬುದ್ದಿ ಇಲ್ಲ. ಐದು ವರ್ಷದವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.