ಬೆಂಗಳೂರು – ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಕೆಲಸ ಸುಲಭವಾಗ ಬೇಕೆಂದರೆ ಜೆಡಿಎಸ್ ಕುದುರೆಗೆ ಲಗಾಮು ಹಾಕಬೇಕು ಎಂದು ವ್ಯೂಹ ರಚಿಸಿದ್ದರು. ಆದರೆ ಈ ವ್ಯೂಹ ಚುನಾವಣೆಯಲ್ಲಿ ಭೇದಿಸುವ ಬದಲಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೂ ಮುನ್ನವೇ ಛಿದ್ರಗೊಂಡಿದೆ.ಅದು ಹೇಗಂತಿರಾ ಈ ಸ್ಟೋರಿ ನೋಡಿ.
ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ರಾಜ್ಯದೆಲ್ಲೆಡೆ ಭರಾಟೆ ಪ್ರಚಾರದಲ್ಲಿ ತೊಡಗಿವೆ.
ಪಂಚರತ್ನ ಯಾತ್ರೆ ಮೂಲಕ ಗಮನ ಸೆಳೆಯುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ, ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಹಳೆ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ ಗೆ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್ ಚುನಾವಣೆ ನಂತರ ಯಾವ ನಿಲುವು ಬೇಕಾದರೂ ತಡೆಯಬಹುದು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅನ್ನು ಕಟ್ಟಿ ಹಾಕಲು ಶಿವಕುಮಾರ್ ತಂತ್ರ ರೂಪಿಸುತ್ತಿದ್ದಾರೆ.
ಜೆಡಿಎಸ್ ಅನ್ನು ಕಟ್ಟಿ ಹಾಕಬೇಕೆಂದರೆ ಆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒಂದೇ ಕ್ಷೇತ್ರದಲ್ಲಿ ಹೆಚ್ಚು ಕಾಲ ಕಳೆಯುವಂತೆ ಮಾಡಬೇಕು ಎನ್ನುವುದು ಶಿವಕುಮಾರ್ ಅವರ ಲೆಕ್ಕಾಚಾರ.
ಕುಮಾರಸ್ವಾಮಿ ತಮ್ಮ ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಅದಕ್ಕಾಗಿ ಜೆಡಿಎಸ್ ನ ಭದ್ರಕೋಟೆ ಹಾಗೂ ಅದೃಷ್ಟದ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿರುವ ರಾಮನಗರ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುತ್ತಿದ್ದಾರೆ.ಇಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿ ನೀಡಿದರೆ,ಕುಮಾರಸ್ವಾಮಿ ಹೆಚ್ಚಿನ ಸಮಯ ಇಲ್ಲಿಗೆ ಮೀಸಲಿಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ವ್ಯೂಹ ರಚಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಸದ ಸುರೇಶ್ ಕ್ಷೇತ್ರದಲ್ಲಿ ಪ್ರವಾಸ ಕೂಡಾ ಆರಂಭಿಸಿದ್ದರು.ಇದರಿಂದಾಗಿ ಇದು ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು.
ಆದರೆ ಈಗ ಡಿ.ಕೆ.ಸುರೇಶ್ ಇದೀಗ ಏಕಾಏಕಿ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆದಿ ಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಶ್ರೀಗಳ ಸಲಹೆ ಎನ್ನಲಾಗಿದೆ.
ಈ ಸಲಹೆ ಕೇಳಿಬಂದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್ ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯೇ ಇಲ್ಲ. ಈ ಹೊಲಸು ಬಿಜೆಪಿ ಸರ್ಕಾರದ ಆಡಳಿತ ನೋಡಿದ ಮೇಲೆ ಭ್ರಮ ನಿರಾನವಾಗಿದೆ ಎಂದು ಹೇಳಿದರು.
ಏನಪ್ಪ ಇದು ಇಂತಹ ಹೊಲಸು ವ್ಯವಸ್ಥೆ ಬಂದು ಬಿಟ್ಟಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಮಿಷನ್ ಕೊಟ್ಟು ಅನುದಾನ ತರೊದು ನೋಡಿದರೆ ಅಸಹ್ಯ ಅನಿಸುತ್ತದೆ. ಅಡಳಿತ ಪಕ್ಷದ ಶಾಸಕರೆ ಕಮಿಷನ್ ಕೊಡುತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಇಲ್ಲಿ ರಾಜಕಾರಣ ಮಾಡಬೇಕು ಅನಿಸುತ್ತದೆಯೇ? ಬೇಡವಾ ನೀವೆ ಹೇಳಿ ಎಂದು ತಿಳಿಸಿದರು.
ಸುರೇಶ್ ಅವರ ಈ ನಿಲುವಿಗೆ ನಿರ್ಮಲಾನಂದ ಶ್ರೀಗಳ ಸಲಹೆ ಪ್ರಮುಖ ಕಾರಣ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಡಿ.ಕೆ.ಶಿವಕುಮಾರ್ ಅವರು ನಿರ್ಮಲಾನಂದ ಶ್ರೀಗಳ ಜೊತೆ ಮಾತುಕತೆ ನಡೆಸುವ ವೇಳೆ ರಾಮನಗರ ವಿಧಾನಸಭೆ ಚುನಾವಣೆ ವಿಷಯ ಚರ್ಚೆಗೆ ಬಂದಿತ್ತು ಎನ್ನಲಾಗಿದೆ.
ಈ ವೇಳೆ ತಮಗೆ ಸಮುದಾಯದ ಬೆಂಬಲದ ಅಗತ್ಯವಿದೆ ಈ ಬಾರಿ ಕಾಂಗ್ರೆಸ್ ತಮ್ಮ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ.ಹೀಗಾಗಿ ಸಮುದಾಯದ ಶ್ರೀ ಗಳಾದ ತಾವು ನನಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರೆನ್ನಲಾಗಿದೆ.
ಈ ವೇಳೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ ಶ್ರೀ ಗಳು ರಾಜಕೀಯವನ್ನು ರಾಜಕೀಯವಾಗಿಯೇ ಎದುರಿಬೇಕು ಇಂತಹ ಸಂದರ್ಭಗಳಲ್ಲಿ ವಯಕ್ತಿಕ ವಿಷಯ ಪ್ರಮುಖವಾಗಬಾರದು.ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ ಇದನ್ನು ವೈಯಕ್ತಿಕವಾಗಿ ಪರಿಗಣಿಸದಂತೆ ಮಾಡಿದ ಮನವಿ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದರೆನ್ನಲಾಗಿದೆ
ಈ ಹಿನ್ನೆಲೆಯಲ್ಲಿ ರಾಮನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್ ಕಣಕ್ಕಿಳಿಯುವುದು ಖಚಿತವಾದಂತಾಗಿದೆ.
Previous ArticleBJP ಸಿಎಂ ಅಭ್ಯರ್ಥಿ ಯಾರು?
Next Article ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ