ಬೆಂಗಳೂರು,ಮಾ.20 – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ.ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದರೆ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಅಭಿಪ್ರಾಯವಿದೆ.
ಆದರೆ ಇತ್ತೀಚಿನ ಕೆಲ ವಿದ್ಯಮಾನಗಳು ಇಂತಹ ಬೆಳವಣಿಗೆ ಅನುಮಾನ ಎನ್ನುತ್ತಿವೆ. ಚುನಾವಣೆಯನ್ನು ಸಿಎಂ ಬೊಮ್ಮಾಯಿ ನೇತೃತ್ವದ ಬದಲಿಗೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಪಕ್ಷ ನಿರ್ಧರಿಸಿದೆ ಈ ಹಿನ್ನೆಲೆಯಲ್ಲಿ ಫಲಿತಾಂಶಸ ನಂತರ ಸಿಎಂ ಹುದ್ದೆ ಬಗ್ಗೆ ನಿರ್ಧಾರ ಪ್ರಕಟಿಸಲು ಹೈಕಮಾಂಡ್ ತೀರ್ಮಾನಿಸಿದೆ.
ಇದಕ್ಕೆ ಪೂರಕವೆಂಬಂತೆ ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ನಿರೀಕ್ಷೆ ಮೀರಿದ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದೆ. ಚುನಾವಣೆಯಲ್ಲಿ 140ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ.ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ನಾಯಕತ್ವದಲ್ಲಿ ಜನ ವಿಶ್ವಾಸವಿಟ್ಟು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು
ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಗೊತ್ತಾಗುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ನಾನೇ ಎಂಬುದಾಗಿ ಕೆಲವರು ಮಾತನಾಡುತ್ತಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಪ್ರತಿಕ್ರಿಯೆ ನೀಡಿದರು.
ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದು ಅದ್ಭುತ ಕಾರ್ಯಕ್ರಮ ಆಗಲಿದೆ. ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಸರಿಸಮ ಅಲ್ಲ ಎಂದು ಅವರು ಹೇಳಿದರು.
ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗೆ ಬಿ.ಎಸ್.ಯಡಿಯೂರಪ್ಪ ತೆರೆಯಳೆದರು. ಶಾಸಕಿಯ ಹೆಗಲ ಮೇಲೆ ಕೈಹಾಕಿ ‘ಅವರು ನಮ್ಮ ಜೊತೆ ಇದ್ದಾರಲ್ಲಾ' ಎಂದು ಸುದ್ದಿಗಾರರಿಗೆ ಮರುಪ್ರಶ್ನಿಸಿದರು.
ಶಾಸಕಿ ಪೂರ್ಣಿಮಾ, ‘ಕೆಲ ವಿದ್ಯುನ್ಮಾನ ಮಾಧ್ಯಮಗಳು ವಿನಾ ಕಾರಣ ವದಂತಿ ಸೃಷ್ಟಿಸುತ್ತಿವೆ' ಎಂದು ಸ್ಪಷ್ಟನೆ ನೀಡಲು ಮುಂದಾದರು. ‘ಹೀಗಾದರೂ ಪ್ರಚಾರ ಸಿಗುತ್ತದೆ ಅಲ್ಲವೇ' ಎಂದು ಯಡಿಯೂರಪ್ಪ ತಿಳಿಹಾಸ್ಯದ ಮೂಲಕ ಗೊಂದಲಕ್ಕೆ ತೆರೆ ಎಳೆದರು.
Previous Articleರಮೇಶ್ ಜಾರಕಿಹೊಳಿಗೆ BJP ಗೇಟ್ ಪಾಸ್?
Next Article Electionಗೆ ಮುನ್ನವೇ DK ವ್ಯೂಹ ಛಿದ್ರ