ಬೆಂಗಳೂರು,ಜ.7- ಹಿಂದೂಪರ ಕಾರ್ಯಕರ್ತರು ಎನ್ನಲಾದ ಕೆಲವರು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ನಡೆಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ (Communal Violence) ಇಂತಹ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದೆ. ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಪುನೀತ್ ಕೆರೆಹಳ್ಳಿ ಜಾಲಾತಾಣದಲ್ಲಿ ಹರಿಯಬಿಟ್ಟಿರುವ ಸಂದೇಶವನ್ನು ಉಲ್ಲೇಖಿಸಿ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ನೇತೃತ್ವದಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗದ ಅಧ್ಯಕ್ಷರಾದ ಬಿ.ಎಲ್.ಚೇತನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜೈ ರಾಷ್ಟ್ರ ರಕ್ಷಣಾ ಪಡೆ ಎಂಬ ಹೆಸರಿನಡಿ ಸಕ್ರಿಯವಾಗಿರುವ ವಾಟ್ಸಪ್ ಗ್ರೂಪ್‍ನಲ್ಲಿ ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸೋಕೆ ಬಿಜೆಪಿ ನಮಗೆ ಬೆಂಬಲ ಕೊಟ್ಟಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ರೆಡಿಯಾಗಿರಿ, ಎಲ್ಲಿ, ಏನು ಮಾಡಬೇಕೆಂಬುದನ್ನು ನಾವು ಈ ವಾಟ್ಸಪ್ ಗ್ರೂಪ್‍ನಲ್ಲಿ ಮಾಹಿತಿ ಕೊಡುತ್ತಿರುತ್ತೇವೆ. ಜೈ ರಾಷ್ಟ್ರ ರಕ್ಷಣಾ ಪಡೆ-2024 ಕ್ಕೆ ಮತ್ತೊಮ್ಮೆ ಮೋದಿ ಎಂಬ ಮೆಸೇಜ್ ಹಾಕಿದ್ದಾರೆ. ಸಂದೇಶ ರವಾನೆಯಾದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಪುನೀತ್ ಕೆರೆಹಳ್ಳಿ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ವ್ಯಕ್ತಿ ಈಗಾಗಲೇ ಕೋಮುವಾದಿ ಕುಖ್ಯಾತಿಗೆ ಒಳಗಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಮತ್ತು ಆತನ ಸಂಗಡಿಗರು ಎಲ್ಲೆಲ್ಲಿ ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಪಡೆದು ದುಷ್ಕøತ್ಯ ತಡೆಯಬೇಕು, ಕೋಮುಗಲಭೆ ಎಬ್ಬಿಸಲು ಸುಪಾರಿ ಕೊಟ್ಟಿರುವ ಬಿಜೆಪಿ ಹಾಗೂ ಇತರೆ ಸಂಘಟನೆಗಳ ಮುಖಂಡರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.