ಬೆಂಗಳೂರು,ಏ.15: ಬಿಜೆಪಿ ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (Eshwarappa) ಅವರಿಗೆ ಹೈಕಮಾಂಡ್ ಬಂಪರ್ ಆಫರ್ ನೀಡಿದೆ.
ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಈಶ್ವರಪ್ಪ ಹಿಂದೂ ಮತ ಬ್ಯಾಂಕಿಗೆ ಕನ್ನ ಹಾಕುವ ಸಾಧ್ಯತೆಗಳಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದೀಗ ಹೈಕಮಾಂಡ್ ಅವರ ಜೊತೆ ರಾಜಿ ಸಂಧಾನಕ್ಕೆ ಮುಂದಾಗಿದೆ.
ರಾಜ್ಯ ಬಿಜೆಪಿ ಒಂದು ಕುಟುಂಬದ ಮುಷ್ಟಿಯಲ್ಲಿ ಸಿಲುಕಿದೆ ಇದರ ವಿರುದ್ಧ ತಮ್ಮ ಹೋರಾಟ ಎಂದು ಘೋಷಿಸಿರುವ ಈಶ್ವರಪ್ಪ ಅವರು ನಾಯಕರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಇದರಿಂದ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿಗೆ ದೊಡ್ಡ ಪ್ರಮಾಣದ ಹಿನ್ನಡೆ ಉಂಟು ಮಾಡಲಿದೆ ಎಂಬ ವರದಿಗಳು ಹೈಕಮಾಂಡ್ ಅಂಗಳ ತಲುಪಿದೆ.
ವರಿಷ್ಠರ ಸೂಚನೆಯ ಮೇರೆಗೆ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಸಿಂಗ್, ಚುನಾವಣೆ ಕಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದಾರೆ.
ವರಿಷ್ಟವಾದ ಮೇರೆಗೆ ನಾಮಪತ್ರ ವಾಪಸ್ ಪಡೆದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗಿದರೆ ಹೈಕಮಾಂಡ್ ತಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಪ್ರತಿಪಕ್ಷ ನಾಯಕನ ಹುದ್ದೆ ನೀಡಲಿದೆ ಎಂದು ಹೇಳಿದ್ದಾರೆಂದು ಗೊತ್ತಾಗಿದೆ.
ಆದರೆ ಈ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಈಶ್ವರಪ್ಪ ಅವರು ಸದ್ಯದ ಪರಿಸ್ಥಿತಿಯಲ್ಲಿ ತಾವು ನಾಮಪತ್ರ ವಾಪಸ್ ಪಡೆಯುವ ಸ್ಥಿತಿಯಲ್ಲಿ ಇಲ್ಲ ತಮ್ಮೊಂದಿಗೆ ದೊಡ್ಡ ಪ್ರಮಾಣದ ಹಿಂದೂ ಪರ ಕಾರ್ಯಕರ್ತರು ನಿಂತಿದ್ದಾರೆ ನಾನು ನಾಮಪತ್ರ ವಾಪಸ್ ಪಡೆದರೆ ಅವರೆಲ್ಲ ಅಸಮಾಧಾನ ಗೊಳ್ಳುತ್ತಾರೆ ಅಲ್ಲದೆ ತಾವು ರಾಜಕೀಯ ಹುದ್ದೆಗಾಗಿ ಸ್ಪರ್ಧೆ ಮಾಡಿಲ್ಲ ಬಿಜೆಪಿಯನ್ನು ಒಂದು ಕುಟುಂಬದ ಹಿಡಿತದಿಂದ ಬಿಡಿಸಬೇಕು ಎಂಬ ಸೈದ್ಧಾಂತಿಕ ಸಂಘರ್ಷ ಮಾಡುತ್ತಿದ್ದೇನೆ ಎಂದು ಹೇಳಿದರೆನ್ನಲಾಗಿದೆ.
ಯಾವಾಗ ಈಶ್ವರಪ್ಪ ಅವರು ಈ ರೀತಿಯಾಗಿ ಹೈಕಮಾಂಡ್ ರಾಜಿ ಸೂತ್ರವನ್ನು ತಿರಸ್ಕರಿಸಿದ್ದಾರೆ ಎಂಬ ಸಂದೇಶ ರವಾನೆಯಾಗಿದೆಯೋ ಆ ಕ್ಷಣದಿಂದಲೇ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿರುವ ಯಡಿಯೂರಪ್ಪ ಈ ಕುರಿತಂತೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ.