ಬೆಂಗಳೂರು – ರಾಜ್ಯ ಸರ್ಕಾರದ ವಿವಿಧ ಇಲಾಖೆಯ ನೌಕರರ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿರುವ ಆರೋಪ ಕೇಳಿಬಂದಿದೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಡಳಿತ ಯಂತ್ರದಲ್ಲಿ ಕೊಂಚ ಬದಲಾವಣೆ ಸಹಜ.ಕೆಲವು ಅಧಿಕಾರಿಗಳು ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ ಆ ಕಡೆಗೆ ವರ್ಗಾಯಿಸಲ್ಪಡುತ್ತಾರೆ.
ಇಂತಹ ವರ್ಗಾವಣೆ ಸಮಯದಲ್ಲಿ ಅಲ್ಪ-ಸ್ವಲ್ಪ ಹಣಕಾಸಿನ ವಹಿವಾಟು ಕೂಡ ನಡೆಯುತಿತ್ತು. ಆದರೆ,ಇತ್ತೀಚೆಗೆ ವರ್ಗಾವಣೆ ಎಂದರೆ ಕೇವಲ ಹಣ ಮಾಡುವ ದಂಧೆ ಎಂಬಂತಾಗಿದೆ ಎನ್ನುವ ದೂರುಗಳು ಮಾಮೂಲಿಯಾಗಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ತನ್ನ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವುದಾಗಿ ಹೇಳಿದ್ದರು.
ಅದರಲ್ಲೂ ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರಂತೂ ಇದರ ವಿರುದ್ಧ ಸಮರವೇ ಘೋಷಿಸಿದ್ದರು,ಇದೀಗ ಇವರ ನೇತೃತ್ವದಲ್ಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.ಇವರ ಮೂಗಿನ ಅಡಿಯಲ್ಲೇ ಎಲ್ಲವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಾರ್ವತ್ರಿಕ ವರ್ಗಾವಣೆ ಗೆ ಆದೇಶ ಹೊರಡಿಸಿ,ಅದಕ್ಕೆ ವಿಧಿಸಲಾದ ಅಂತಿಮ ಗಡುವು ಎಂದೋ ಮುಗಿದು ಹೋಗಿದೆ.ಆದರೂ ವರ್ಗಾವಣೆ ನಿಂತಿಲ್ಲ.ಮಂತ್ರಿಗಳ ಕಚೇರಿ, ಮನೆಗಳ ಮುಂದೆ ವರ್ಗಾವಣೆ ಬಯಸುವ ಅಧಿಕಾರಿಗಳು, ಅವರ ಆಪ್ತರು,ಮಧ್ಯವರ್ತಿಗಳದೊಡ್ಡ ದಂಡೇ ನೆರದಿರುತ್ತದೆ.ಮುಖ್ಯಮಂತ್ರಿಗಳ ಸಚಿವಾಲಯವಂತೂ ವರ್ಗಾವಣೆ ಶಿಫಾರಸ್ಸು ಪತ್ರಗಳಿಂದ ತುಂಬಿ ಹೋಗಿದೆ.
ಈ ಎಲ್ಲಾ ಅಂಶಗಳ ನಡುವೆ,
ಅಬಕಾರಿ, ಗೃಹ, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ನೋಂದಣಿ ಮತ್ತು ಮುದ್ರಾಂಕ, ಸೇರಿ ಇತರ ಇಲಾಖೆಗಳಲ್ಲೂ ವರ್ಗಾವಣೆಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದ ಹಣದ ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.
ಗೃಹ ಇಲಾಖೆಯಲ್ಲಿ ಐಪಿಎಸ್, ಎಸಿಪಿ, ಡಿಸಿಪಿ, ಡಿವೈಎಸ್ಪಿ, ಇನ್ಸ್‍ಪೆಕ್ಟರ್ ಹುದ್ದೆಗಳಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಿಲ್ಲಾ ನೋಂದಾಣಿಕಾರಿಗಳು, ಉಪ ನೋಂದಾಣಿಕಾರಿ ಹುದ್ದೆ, ಕಂದಾಯ ಇಲಾಖೆಯ ತಹಸೀಲ್ದಾರ್ ಗ್ರೇಡ್-1, ತಹಸೀಲ್ದಾರ್ ಗ್ರೇಡ್-2, ಉಪ ತಹಸೀಲ್ದಾರ್ ಹುದ್ದೆ, ಇಂಧನ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಹುದ್ದೆಗಳ ವರ್ಗಾವಣೆಗೆ ನಿರ್ಧಿಷ್ಟ ಲಂಚ ನಿಗದಿಪಡಿಸಲಾಗಿದೆ ಎಂಬ ಮಾತುಗಳು ವಿಧಾನಸೌಧದ ಗೋಡೆಗಳಲ್ಲಿ ಕೇಳಿ ಬರುತ್ತಿವೆ.
ಅಬಕಾರಿ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಸನ್ನದು ಸಂಖ್ಯೆಗಳ ಅನುಗುಣವಾಗಿ ಪ್ರತಿ ಅಬಕಾರಿ ಉಪ ಆಯುಕ್ತರ ಹುದ್ದೆಗೆ 1.5 ಕೋಟಿ ರೂ.ನಿಂದ 2.5 ಕೋಟಿ ರೂ.ವರೆಗೆ ನಿಗದಿ ಮಾಡಲಾಗಿದೆ ಎಂಬುದು ವ್ಯಾಪಕವಾಗಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಬೆಂಗಳೂರಿನ ವಿವಿಧ ವಿಭಾಗದ ಪ್ರತಿ ಅಬಕಾರಿ ಉಪ ಆಯುಕ್ತ ಹುದ್ದೆಗೆ ಬರೋಬ್ಬರಿ 3 ಕೋಟಿ ರೂ. ನಿಗದಿಗೊಳಿಸಲಾಗಿದೆ ಎನ್ನಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಮುನ್ನ ಕೆಲ ಅಧಿಕಾರಿಗಳಿಂದ ಪದೋನ್ನತಿ ನೀಡಿ ವರ್ಗಾವಣೆಗೆ ಕೋಟ್ಯಂತರ ರೂ. ಲಂಚ ವಸೂಲಿ ಮಾಡಲಾಗಿತ್ತು ಎಂಬ ಆರೋಪವು ಕೇಳಿಬರುತ್ತಿದೆ. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಆಗಲಿಲ್ಲ. ಇತ್ತ ವರ್ಗಾವಣೆಯಾಗದೆ ಅತ್ತ ಕೊಟ್ಟ ಹಣವೂ ಸಿಗದೆ ಒದ್ದಾಡುತ್ತಿರುವ ಕೆಲ ಅಧಿಕಾರಿಗಳು, ಈಗ ವರ್ಗಾವಣೆಗೆ ಮತ್ತೊಮ್ಮೆ ಭಾರೀ ಪ್ರಮಾಣದ ಹಣ ಕೊಡಬೇಕಾದ ಪರಿಸ್ಥಿತಿಯಲ್ಲಿ
ಗ್ರೂಪ್ ಎ, ಬಿ ಹುದ್ದೆಯ ಅಕಾರಿಗಳು ಲಾಭದಾಯಕ ಹುದ್ದೆಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪಕ್ಕೆ ಒಳಗಾದವರು. ಅಮಾನತ್ತಾದವರು ಲಾಭದಾಯಕ ಹುದ್ದೆಯಲ್ಲಿ ಕುಳಿತು ಕಾರ್ಯಾಭಾರ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯುಕ್ತ, ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳು ಹೆಚ್ಚಾಗಿ ಪ್ರಭಾರ ಹುದ್ದೆಗಳಿಗೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.ಐಎಎಸ್ ಅಧಿಕಾರಿಗೆ ಯಾವುದಾದರೂ ಇಲಾಖೆಗಳಲ್ಲಿ ಒಂದು ಅಥವಾ ಎರಡು ಪ್ರಭಾರ ಹುದ್ದೆಗಳು ಇದ್ದೇ ಇರುತ್ತವೆ.ಇಂತಹವುಗಳಿಗೆ ಹೆಚ್ಚಿನ ಪೈಪೋಟಿ ಕಂಡುಬಂದಿದ್ದು ಭಾರಿ ಪ್ರಮಾಣದ ಹಣಕಾಸಿನ ವಹಿವಾಟು ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
Previous Articleಲಾಭದಾಯಕ ಸಂಸ್ಥೆಯಾದ KREDL
Next Article ಮೋದಿ ಮುಖ್ಯ ಅತಿಥಿಯಾಗಿದ್ದಕ್ಕೆ ವ್ಯಾಪಕ ಟೀಕೆ