ಬೆಂಗಳೂರು,ಏ.19- ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ಕಾವು ತೀವ್ರಗೊಂಡಿದ್ದು ಮೊದಲ ಹಂತದ ಮತದಾನಕ್ಕೆ ವೇದಿಕೆ ಸಜ್ಜಾಗುತ್ತಿರುವ ಬೆನ್ನೆಲ್ಲೇ ಇದೀಗ ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿಶ್ವಾಸದ ಬಗ್ಗೆ ಮತ್ತೊಂದು ಪ್ರಶ್ನೆ ಎದ್ದಿದೆ.
ಚುನಾವಣೆಯಲ್ಲಿ ಆಡಳಿತ ರೂಢ ಬಿಜೆಪಿ ಮತಯಂತ್ರಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಸಾಮಾನ್ಯವಾಗಿರುವ ಸಮಯದಲ್ಲಿ ಚುನಾವಣೆಗೂ ಮುನ್ನವೇ ಮತ ಯಂತ್ರಗಳ ಕುರಿತು ಗೃಹ ಸಚಿವ ಪರಮೇಶ್ವರ್ ಆಘಾತಕಾರಿಯಾದ ಹೇಳಿಕೆಯನ್ನು ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷದ ಬಗ್ಗೆ ನಾವು ಪ್ರಾರಂಭದಿಂದ ಹೇಳುತ್ತಿದ್ದೇವೆ. ಈಗಲೂ ಇವಿಎಂ ಮೇಲೆ ನಮಗೆ ಅನುಮಾನ ಇದೆ ಎಂದು ತಿಳಿಸಿದರು.
ಕೇರಳದಲ್ಲಿ ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ ಬಿದ್ದಿದೆ. ಬಿಜೆಪಿಯವರು ಎಲ್ಲ ಕ್ಷೇತ್ರಗಳಲ್ಲಿ ಹೀಗೆ ಮಾಡುವುದಿಲ್ಲ. ತುಂಬಾ ಬುದ್ಧಿವಂತಿಕೆಯಿಂದ ಈ ಕೆಲಸ ಮಾಡುತ್ತಾರೆ. 150-200 ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರದಲ್ಲಿ ಹ್ಯಾಕ್ ಮಾಡುತ್ತಾರೆ ಎಂಬ ಅನುಮಾನ ಇದೆ ಎಂದು ಹೇಳಿದರು.